ಭಟ್ಕಳ: ಭಟ್ಕಳದ ನಗರ ಹಾಗೂ ಗ್ರಾಮಾಂತರ ಪೊಲೀಸ ಠಾಣೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ
ಹೆಲ್ಮೆಟ್ ಧರಿಸುವಂತೆ ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.
ಕಳೆದ ಕೆಲ ದಿನಗಳ ಹಿಂದಷ್ಟೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಮನ್.ಡಿ.ಪೆನ್ನೇಕರ್ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ದ್ವಿಚಕ್ರ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸಿ ತಾಲ್ಲೂಕಿನಲ್ಲಿ ಬೈಕ್ ಚಲಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಡಿವೈಎಸ್ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಸಿಪಿಐಗಳಾದ ದಿವಾಕರ್ ಹಾಗೂ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ಪೊಲೀಸ್ ಪೇದೆಗಳು ಹೆಲ್ಮೆಟ್ ಧರಿಸಿ ಎರಡೂ ಠಾಣೆಯ ವ್ಯಾಪ್ತಿಯಲಿ ಬೈಕ್ರ‍್ಯಾಲಿ ನಡೆಸಿ, ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ನಿಯಮವನ್ನು ಪಾಲಿಸಬೇಕೆಂದು ಎಂದು ಜಾಗೃತಿ ಮೂಡಿಸಿದರು.
ಈ ವೇಳೆ ಗ್ರಾಮಾಂತರ ಠಾಣೆಯ ಸಿ.ಪಿ.ಐ ಮಹಾಬಲೇಶ್ವರ ನಾಯ್ಕ ತ್ರಿಬಲ್ ರೈಡ್ ಮಾಡದಂತೆ ಹಾಗೂ ಬೈಕಗೆ ಕರ್ಕಶ ಶಬ್ದದ ಸೈಲೆನ್ಸರ್ ಬಳಸದಂತೆ ಯುವಕರಿಗೆ ತಿಳಿ ಹೇಳಿದರು. ವಾಹನ ಚಲಾಯಿಸುವಾಗ ಮೊಬೈಲ್‌ಗಳಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು 18 ವರ್ಷದ ಕೆಳಗಿನ ಮಕ್ಕಳಿಗೆ ಬೈಕ್ ನೀಡದಂತೆ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಠಾಣಾ ಸಿಪಿಐಗಳಾದ ದಿವಾಕರ್ ಹಾಗೂ ಮಹಾಬಲೇಶ್ವರ ನಾಯ್ಕ, ನಗರ ಹಾಗೂ ಗ್ರಾಮಾಂತರ ಠಾಣಾಯ ಪಿ.ಎಸ್.ಐ ಗಳಾದ ಸುಮಾ ಆಚಾರ್ಯ, ಹನುಮಂತಪ್ಪ ಕೂಡಗುಂಟಿ, ಭರತ್ ನಾಯಕ ಹಾಗೂ ಸಿಬ್ಬಂದಿಗಳು ಹಾಜರಿದ್ದರು.