ಸಿದ್ದಾಪುರ: ಪ್ರವೀಣ್ ನೆಟ್ಟಾರ್ ಹತ್ಯೆಯ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರವೀಣ್ ಭಾವಚಿತ್ರ ಹಿಡಿದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪಟ್ಟಣದ ಚಂದ್ರಗುತ್ತಿ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಸಾಗಿ ಗಾರ್ಡನ್ ಸರ್ಕಲ್, ಹಳೆ ಬಸ್ ನಿಲ್ದಾಣದ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿದ ಕಾರ್ಯಕರ್ತರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸುವುದರ ಜೊತೆಗೆ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹಿಂದೂಗಳ ಹತ್ಯೆ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿಯವರು ಸರ್ಕಾರ ನಡೆಸುತ್ತಿದ್ದಾರಾ.? ಎಂದು ಪ್ರಶ್ನಿಸಿದರು. ಮಂತ್ರಿ, ಶಾಸಕರ ಮಕ್ಕಳು ಸಾಯುತ್ತಿಲ್ಲ. ಹಿಂದುಳಿದ, ದಲಿತರ ಮಕ್ಕಳೆ ಬಲಿಯಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿಜವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಸರ್ಕಾರ ನಡೆಸಲು ಆಗದಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗಿ ಎಂದು ಒತ್ತಾಯಿಸಿದರು.
ಈ ವೇಳೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ವಿ.ಎನ್.ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ ಸೇರಿದಂತೆ ಅನೇಕರು ಹಾಜರಿದ್ದರು.