ಶಾಲೆ ದತ್ತು ಪಡೆಯುವ ಭರವಸೆ ನೀಡಿದ ಉಳ್ವೇಕರ್.! ತಿಂಗಳಿಗೊಮ್ಮೆ ಶಾಲೆಗೆ ಭೇಟಿ ನೀಡುವ ವಾಗ್ದಾನ

ಕಾರವಾರ: ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದಗಾದ ಜನತಾ ವಿದ್ಯಾಲಯದಲ್ಲಿ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.

ಬಳಿಕ ಶಾಲಾ ಸಂಸತ್ತಿನಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳಿಗೆ ರಾಷ್ಟ್ರ ಧ್ವಜಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಒಂದು ಶಾಲೆ ದತ್ತು ಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ತಕ್ಷಣ ಸ್ಪಂದನೆ ನೀಡಿದ ಉಳ್ವೇಕರ್ ಅವರು ಒಂದು ಶಾಲೆ ದತ್ತು ತೆಗೆದುಕೊಳ್ಳುವುದಾಗಿ ಹಾಗೂ ತಿಂಗಳಿಗೊಮ್ಮೆ ದಿನ ಈ ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾರವಾರ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಅಮದಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ನಾಯ್ಕ, ಉಪಾಧ್ಯಕ್ಷ ರವಿ ದುರ್ಗೇಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ಶಿಕ್ಷಕ ಜೈರಂಗನಾಥ ಮುಂತಾದವರು ಇದ್ದರು.