ಎಸ್.ಡಿ.ಎಂ.ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಸಿ.ಎ. ಫೌಂಡೇಶನ್ ತರಗತಿ ಉದ್ಘಾಟನಾ ಸಮಾರಂಭ

ಹೊನ್ನಾವರ : ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್  ಎಂಡ್ ರಿಸರ್ಚ್, ಡಾ.ಭಂಡಾರಿ ಎಂಡ್ ಅಸೋಸಿಯೇಟ್ಸ್  ಕಾಮರ್ಸ್ ಅಕಾಡೆಮಿ ಸಹಯೋಗದಲ್ಲಿ ಎಸ್.ಡಿ.ಎಂ.ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಸಿ.ಎ. ಫೌಂಡೇಶನ್ ತರಗತಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು…

ಕಾರ್ಯಕ್ರಮವನ್ನು ಐಸಿಎಐ ಮಂಗಳೂರು ವಿಭಾಗದ ಮುಖ್ಯಸ್ಥರಾದ ಸಿಎ ಗೌತಮ್ ನಾಯಕ್ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಿ.ಎ. ಫೌಂಡೇಶನ್ ಕುರಿತಾಗಿ ಮಾಹಿತಿಯನ್ನು ನೀಡಿದರು. ಸಿ.ಎ. ಫೌಂಡೇಶನ್ ನಂತಹ ಕೋರ್ಸ್ ನಡೆಸುವ ಆಸಕ್ತಿ ಹೊನ್ನಾವರದಂತಹ ಪ್ರದೇಶದಲ್ಲಿ ಬೆಳೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಕೋರ್ಸ್‍ನ ಸಂಪೂರ್ಣ ಲಾಭವನ್ನು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು…

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಸಿಎ ಎಂ.ಎನ್. ಪೈ ಮಾತನಾಡಿ, ಕಷ್ಟ ಎನ್ನುವ ಕಾರಣಕ್ಕೆ ಸಿ.ಎ ಕೋರ್ಸ್ ಮಾಡಬೇಕು. ಎಲ್ಲರೂ ಮಾಡುವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಉತ್ತಮವಲ್ಲ. ಜೊತೆಗೆ ನಿಮಗೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು. ಯಶಸ್ಸು ಪಡೆಯಲು ಸರಿಯಾದ ಸಮಯದ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ಸೋಲನ್ನು ಸಹ ಧನಾತ್ಮಕವಾಗಿ ಸ್ವೀಕರಿಸಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು…

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ನಿಮ್ಮ ಅದೃಷ್ಟದ ಬಾಗಿಲು ತೆರೆದಿದೆ. ವಿದ್ಯಾರ್ಥಿಗಳಿಗೆ ಇಚ್ಛಾಶಕ್ತಿ ಇರಬೇಕು. ಅದರ ಕೊರತೆ ಇರಬಾರದು. ಇಚ್ಛಾಶಕ್ತಿ ಕೊರತೆ ಇದ್ದರೆ ಯಶಸ್ಸು ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ತಾವು ಕಲಿಯುವ ಮತ್ತು ಕಲಿಯುತ್ತಿರುವ ವಿಷಯದಲ್ಲಿ ಗಂಭಿರತೆ ಬರಬೇಕು. ಈ ಕೋರ್ಸ್ ಸರಿಯಾಗಿ ಬಳಸಿಕೊಳ್ಳಿ ಎಂದು ಕಿವಿ ಮಾತು ಹೇಳಿದ್ರು…

ಇದೇ ವೇಳೆ ಪಿಯುಸಿ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ , ಪದವಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ.ಡಿ.ಎಲ್.ಹೆಬ್ಬಾರ್, ಎಂ.ಪಿ.ಇ.ಸೊಸೈಟಿ ಕಾರ್ಯದರ್ಶಿ ಎಸ್. ಭಟ್ , ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ,  ಖಜಾಂಚಿ ಉಮೇಶ್ ನಾಯ್ಕ, ತಾಲೂಕಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಜರಿದ್ದರು…