ಅಂಕೋಲಾ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಂಕೋಲಾ : ನಾಡಿನಲ್ಲಿ ಬರದ ಛಾಯೆ ಇದ್ದರೂ ಸಾಂಪ್ರದಾಯಿಕವಾಗಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ವಿಶೇಷವಾಗಿ ಈ ಬಾರಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು.‌ ಫೆಬ್ರುವರಿ 8ರಂದು ಪಟ್ಟಣದ ನಾಡವರ ಸಭಾಭವನದಲ್ಲಿ ನಡೆಯಲಿರುವ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯ ಕುರಿತು ಗುರುವಾರ ಏರ್ಪಡಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.


ಹತ್ತನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಮಹೇಶ ಗೋಳಿಕಟ್ಟಿ ಮಾತನಾಡಿ, ಇದು ಸಾಹಿತ್ಯಾಸಕ್ತರ ಸಮ್ಮೇಳನ ಆಗಬೇಕೆನ್ನುವ ಉದ್ದೇಶದಿಂದ ಆಯೋಜಿಸಲಾಗಿದೆ. ಪ್ರೊ. ನಾಗೇಶದೇವ ಅಂಕೋಲೆಕರ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ತಹಶೀಲ್ದಾರ ಬಿ.ಅನಂತ ಶಂಕರ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಕಸಾಪ ಧ್ವಜಾರೋಹಣ ಹಾಗೂ ಅಂಕೋಲಾ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅವರು ನಾಡ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ ಚಾಲನೆ ನೀಡಲಿದ್ದಾರೆ. ವಿಶೇಷ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಶಾ.ಮ. ಕೃಷ್ಣರಾಯರು ಉದ್ಘಾಟಿಸಲಿದ್ದು, ಶಾಸಕ ಸತೀಶ ಸೈಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಮಳಿಗೆಯನ್ನು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಹಾಗೂ ವಿವಿಧ ದ್ವಾರಗಳನ್ನು ಪದ್ಮಶ್ರೀ ತುಳಸಿ ಗೌಡ ಉದ್ಘಾಟಿಸುವರು.

ಆನಂತರ ಸ್ಥಳೀಯ ಸಮಸ್ಯೆಗಳನ್ನು ಗಮನದಲ್ಲಿರಿಸಿ ವಿಶೇಷ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ ವಹಿಸಲಿದ್ದಾರೆ. ಸರ್ವಾಧ್ಯಕ್ಷರ ಬದುಕು-ಬರಹದ ಕುರಿತು ಉಪನ್ಯಾಸಕ ರಾಮಮೂರ್ತಿ ನಾಯಕ ಮತ್ತು ಫಾಲ್ಗುಣ ಗೌಡ ಮಾತನಾಡಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಮನೋಹರ ನಾಯಕ ವಹಿಸಲಿದ್ದು, ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಆಶಯ ನುಡಿಗಳನ್ನು ವ್ಯಕ್ತಪಡಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಚಾರ್ಯ ಡಾ. ಸಿದ್ದಲಿಂಗಸ್ವಾಮಿ ವಸ್ತ್ರದ ನಿರ್ಣಯ ಮಂಡಿಸಲಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೆಕರ್, ಮಾಜಿ ಸಚಿವ ಆನಂದ ಅಸ್ನೋಟಿಕರ, ನಾಟಿ ವೈದ್ಯ ಹನುಮಂತ ಗೌಡ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಬಿ.ಅನಂತ ಶಂಕರ, ಸಿಡಿಪಿಒ ಸವಿತಾ ಶಾಸ್ತ್ರಿಮಠ, ಬಿಇಓ ಮಂಗಳಲಕ್ಷ್ಮಿ ಪಾಟೀಲ್, ತಾಪಂ ಇಓ ಸುನೀಲ್ ಎಂ, ಕಸಾಪ ಸದಸ್ಯರಾದ ಜಿ.ಆರ್ ತಾಂಡೆಲ್, ಉಪನ್ಯಾಸಕ ಮಹೇಶ ನಾಯಕ, ಡಾ.ಎಸ್ ವಿ.ವಸ್ತ್ರದ, ಮಹಾಂತೇಶ ರೇವಡಿ, ಡಾ.ವಿನಾಯಕ ಹೆಗಡೆ, ಬಾಲಚಂದ್ರ ನಾಯಕ, ಪ್ರಕಾಶ ಕುಂಜಿ, ರಾಜೇಂದ್ರ ಕೇಣಿ, ಎನ್ ವಿ ರಾಥೋಡ, ರಫೀಕ ಶೇಕ್, ಎಮ್ ಎಮ್ ಕರ್ಕಿಕರ, ರಾಜೇಶ್ ಮಾಸ್ತರ್ ಮುಂತಾದವರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ  ವಂದಿಸಿದರು…