ಕೊಂಕಣ ಖಾರ್ವಿ ಸಮಾಜದ ಸ್ಮಶಾನಕ್ಕೆ ತೆರಳುವ ರಸ್ತೆ ಖುಲ್ಲಾಪಡಿಸುವಂತೆ ಮನವಿ

ಅಂಕೋಲಾ : ಇಲ್ಲಿನ ಕೆಳಗಿನ ಮಂಜಗುಣಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಸ್ಮಶಾನಕ್ಕೆ ಹೋಗುವ ದಾರಿ ಖುಲ್ಲಾಪಡಿಸುವ ಕುರಿತು ಸ್ಥಳೀಯ ನೂರಾರು ಯುವಕರು ತಹಶೀಲ್ದಾರ ಕಚೇರಿಗೆ ಆಗಮಿಸಿ ಗುರುವಾರ ಮನವಿಯನ್ನು ಸಲ್ಲಿಸಿದ್ದಾರೆ.


ಕೆಳಗಿನ ಮಂಜಗುಣಿಯ ಸರ್ವೇ ನಂ. 67/1 ಪಶ್ಚಿಮ ದಿಕ್ಕಿನಲ್ಲಿ ಖಾರ್ವಿ ಸಮಾಜದ ಸ್ಮಶಾನವಿದೆ. ಜನವಸತಿ ಪ್ರದೇಶದಿಂದ ಅಲ್ಲಿಗೆ ತೆರಳಲು 1 ಕಿ.ಮೀ. ನಡೆದುಕೊಂಡು ಹೋಗಬೇಕು. ಕಾಲುದಾರಿಯಿದ್ದು, ಸಂಪೂರ್ಣ ರಸ್ತೆ ನಿರ್ಮಾಣವಾಗಿಲ್ಲ. ಹಾಗೆಯೆ ಸುರೇಶ ಥಾಕು ತಾಂಡೇಲ ಎನ್ನುವವರು ಸ್ಮಶಾನ ಜಾಗದ ಪಕ್ಕದಲ್ಲಿ, ತಮ್ಮ ಜಾಗವಿದ್ದು ದಾರಿಯು ನಮಗೆ ಸಂಬಂಧಪಟ್ಟದ್ದು ಎನ್ನುತ್ತಿದ್ದಾರೆ. ಅನಾದಿ ಕಾಲದಿಂದ ಇದ್ದ ಸ್ಮಶಾನಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿದ್ದಾರೆ. ಸ್ಮಶಾನಕ್ಕೆ ತೆರಳಲು ಇನ್ನೊಂದು ದಾರಿಯಿದ್ದು, ಆ ದಾರಿಯಿಂದ ಹೋಗಲು ಅವರು ಹೇಳುತ್ತಾರೆ. ಆ ದಾರಿಯಲ್ಲಿ ಮಳೆಗಾಲದಲ್ಲಿ ಸಮುದ್ರ ನೀರು ತುಂಬಿರುತ್ತದೆ. ಅದಕ್ಕಾಗಿ ನಮಗೆ ಮೊದಲಿದ್ದ ದಾರಿಯೇ ಸೂಕ್ತವಾಗಿದೆ ಎಂದು ಮನವಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ನಮ್ಮ ಸಮಾಜದವರು ಮನವಿ ಸಲ್ಲಿಸಿದ್ದರಿಂದ, ಕೆಲವರಿಗೆ ಮಾತ್ರ ಗುರಿಯಾಗಿಸಿಕೊಂಡು ಕೆಟ್ಟ ಶಬ್ದದಿಂದ ಬೈದು ಬೆದರಿಕೆ ನೀಡುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಅನಾದಿ ಕಾಲದಿಂದ ಇದ್ದ ದಾರಿಯನ್ನು ಸಮಾಜಕ್ಕೆ ಮತ್ತೆ ಅವಕಾಶ ಮಾಡಿಕೊಡಬೇಕು. ವೈಶಮ್ಯಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ತಹಶೀಲ್ದಾರ್ ರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಮಂಜುನಾಥ ಪಿ. ತಾಂಡೇಲ, ಸುಬ್ರಹ್ಮಣ್ಯ ಕುಡ್ತಳಕರ, ಅಶೋಕ ರಾಮ ತಾಂಡೇಲ, ಕೃಷ್ಣ ತಾಂಡೇಲ, ಸಂತೋಷ ಜಿ. ತಾಂಡೇಲ, ವಿಠ್ಠಲ ತಾಂಡೇಲ, ನಾಗರಾಜ ತಾಂಡೇಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.