ಯಲ್ಲಾಪುರದ ಉಮ್ಮಚಗಿಯಲ್ಲಿ ಜ.17 ರಂದು ‘ಉಪಾಸನಂ’ ಸಂಗೀತ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಮನಸ್ವಿನೀ ವಿದ್ಯಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥ ‘ಉಪಾಸನಂ’ ಸಂಗೀತ ಕಾರ್ಯಕ್ರಮ ಜ.17 ರಂದು ಸಂಜೆ 5 ಕ್ಕೆ ವಿದ್ಯಾಲಯದ ಆವಾರದಲ್ಲಿ ನಡೆಯಲಿದೆ ಎಂದು ಮನಸ್ವಿನಿ ವಿದ್ಯಾಲಯದ ಅಧ್ಯಕ್ಷೆ ರೇಖಾ ಭಟ್ಟ ಕೋಟೆಮನೆ ಹೇಳಿದರು.
ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಂಗೀತ ಕಾರ್ಯಕ್ರಮದಲ್ಲಿ ಗೌರಿ ಪಠಾರೆ ಮುಂಬೈ ಅವರ ಗಾಯನ, ಪಂ.ಪ್ರವೀಣ ಗೋಡ್ಖಿಂಡಿ ಅವರ ಕೊಳಲು ವಾದನ ಹಾಗೂ ಸಂಜಿತ್ ಹೆಗಡೆ ತಂಡದ ರಸಮಂಜರಿ ನಡೆಯಲಿದೆ. ಪಂ.ಸುಧೀರ ನಾಯ್ಕ ಮುಂಬೈ ಸಂವಾದಿನಿಯಲ್ಲಿ, ಪಂ.ರಾಜೇಂದ್ರ ನಾಕೋಡ್, ಕಿರಣ ಗೋಡ್ಖಿಂಡಿ ತಬಲಾ ಸಾಥ್ ನೀಡಲಿದ್ದಾರೆ ಎಂದು ವಿವರಿಸಿದರು.
ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಉತ್ತಮ ಓದಿನ ಅವಕಾಶದ ಸಲುವಾಗಿ ಶಾಲೆ ಪ್ರಾರಂಭಿಸಲಾಗಿದೆ. ಸದ್ಯ ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ನಡೆಯಲಿದೆ. ಶಾಲೆಗೆ ಅಗತ್ಯವಾದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಅದರ ಸಹಾಯಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾಲಯದ ಕಾರ್ಯದರ್ಶಿ ಮಂಜುನಾಥ ಹೆಗಡೆ, ಶಿಕ್ಷಕಿ ನೇತ್ರಾವತಿ ಭಟ್ಟ, ನಾಗಭೂಷಣ ಹೆಗಡೆ ಇದ್ದರು.