ಅಂಕೋಲಾದಲ್ಲಿ ಸಂಭ್ರಮದ ಗಣರಾಜ್ಯೋತ್ಸವ: ಒತ್ತಡಗಳಿಗೆ ಮಣಿದು ವಿದ್ಯಾರ್ಥಿಗಳು ರಸ್ತೆಯಲ್ಲಿರುವಾಗಲೇ ಧ್ವಜಾರೋಹಣ ನೆರವೇರಿಸಿದ ತಾಲೂಕು ಆಡಳಿತ.

ಅಂಕೋಲಾ: ತಾಲ್ಲೂಕಿನಲ್ಲಿ ಗಣರಾಜ್ಯೋತ್ಸವದ ಆಚರಣೆ ಸಂಭ್ರಮದಿಂದ ಜರುಗಿತು. ಪುರಸಭೆಯ ಆವರಣದಲ್ಲಿ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಸ್ಮಾರಕ ಭವನದ ಗಾಂಧಿ ಮೈದಾನದಲ್ಲಿ ತಹಶೀಲ್ದಾರ್ ಅನಂತಶಂಕರ ಧ್ವಜಾರೋಹಣ ನೆರವೇರಿಸಿ, ಸಮೃದ್ಧ ಭಾರತ ನಿರ್ಮಾಣದ ನಮ್ಮೆಲ್ಲರ ಕೊಡುಗೆ ಅಮೂಲ್ಯವಾಗಿದೆ. ಹೊಸ ಬದಲಾವಣೆ ನೀರೀಕ್ಷೆ ಮಾಡುವ ಬದಲು ನಮ್ಮಿಂದಲೇ ಆರಂಭವಾಗಲಿ ಎಂದರು.

ಮಕ್ಕಳನ್ನು ಹೊರಗಿಟ್ಟು ಧ್ವಜಾರೋಹಣ

ಪಟ್ಟಣದ ವಿವಿಧ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಪಥ ಸಂಚಲನದಲ್ಲಿ ಗೊಂದಲ ಉಂಟಾಗುವ ಕಾರಣ ಒಂದು ಶಾಲೆಗೆ 50 ವಿದ್ಯಾರ್ಥಿಗಳು ಎಂದು ನಿಗದಿ ಪಡಿಸಲಾಗಿತ್ತು. ಪೂರ್ವಭಾವಿ ಸಭೆಯಲ್ಲಿ ಕೂಡ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಶುಕ್ರವಾರ ಕೆಲವು ಶಾಲೆಗಳಿಂದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಹಿಸಿದ್ದರು. ಹೀಗಾಗಿ 50 ವಿದ್ಯಾರ್ಥಿಗಳನ್ನು ಹೊಂದಿದ್ದ ಕೆಲವು ಶಾಲೆಗಳು ಕೊನೆಯಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಂಡರು. ಮೆರವಣಿಗೆ ಗಾಂಧಿ ಮೈದಾನದಿಂದ ಆರಂಭವಾಗಿ ಪಟ್ಟಣದಲ್ಲಿ ಸಂಚರಿಸಿ ಮತ್ತೆ ಗಾಂಧಿ ಮೈದಾನ ತಲುಪಿದ ನಂತರ ಧ್ವಜಾರೋಹಣ ಮಾಡುವ ಸಾಂಪ್ರದಾಯಿಕ ಪದ್ಧತಿ ಇತ್ತು. ಆದರೆ ಶಾಲೆಯ ವಿದ್ಯಾರ್ಥಿಗಳು ರಸ್ತೆಯಲ್ಲಿ ಇದ್ದಾಗಲೇ ಧ್ವಜಾರೋಹಣಕ್ಕೆ ತಾಲ್ಲೂಕು ಆಡಳಿತ ಮುಂದಾಯಿತು. ಧ್ವಜಾರೋಹಣ ನೆರವೇರಿ ಕಾರ್ಯಕ್ರಮ ಮುಗಿದರೂ ವಿದ್ಯಾರ್ಥಿಗಳು ರಸ್ತೆಯಲ್ಲಿಯೇ ಇದ್ದರು. ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತದಿಂದ ನೆರವೇರುವ ಧ್ವಜಾರೋಹಣ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಮುಂಜಾನೆಯಿಂದಲೇ ದೂರದಿಂದ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳು ನಿರಾಶೆ ಅನುಭವಿಸುವಂತಾಗಿತ್ತು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಈ ರೀತಿ ಆಗಿದ್ದರಿಂದ ವ್ಯವಸ್ಥಿತವಾಗಿ ನೆರವೇರಲಿ ಎಂದು ಜನಪ್ರತಿನಿಧಿಗಳು ಸಾಹಿತಿಗಳು ಮತ್ತು ಪೂರ್ವಭಾವಿ ಸಭೆಯಲ್ಲಿ ಸೇರಿದವರು ಸಲಹೆ ನೀಡಿದ್ದರು. ಸಲಹೆಗೆ ಅನುಗುಣವಾಗಿ ಒಂದು ಶಾಲೆಯಿಂದ 50 ಜನ ವಿದ್ಯಾರ್ಥಿಗಳು ಎನ್ನುವ ನಿಯಮವನ್ನು ತಾಲೂಕು ಆಡಳಿತ ಪಾಲಿಸಿತ್ತು. ಆದರೆ ರಾಷ್ಟ್ರೀಯ ಉತ್ಸವ ಸಮಿತಿಯ ಅಧ್ಯಕ್ಷರು ಏಕಾಏಕಿ ಜ.24 ರಂದು ಸಾರ್ವಜನಿಕ ಆಕ್ಷೇಪಣೆಯ ಮೇರೆಗೆ ಮಿತಿಯನ್ನು ತೆರೆವುಗೊಳಿಸಲಾಗಿದೆ ಎಂದು ಸೂಚನೆ ಹೊರಡಿಸಿದ್ದರು. ಸೂಚನೆಯಲ್ಲಿ ಆಕಸ್ಮಿಕವೋ ಇಲ್ಲವೇ ಬೇಜವಾಬ್ದಾರಿಯಿಂದಲೋ ಗಣರಾಜ್ಯೋತ್ಸವ ಮೆರವಣಿಗೆ ನವೆಂಬರ 1 ರಂದು ಎಂದು ತಪ್ಪು ನಮೂದಿಸಿದ್ದರು. ಈ ಸೂಚನೆಯಿಂದಾಗಿ ಕೆಲವು ಶಾಲೆಗಳ ವಿದ್ಯಾರ್ಥಿಗಳು ಅದರಲ್ಲಿಯೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಸ್ತೆಯಲ್ಲಿರುವಾಗಲೇ ಧ್ವಜಾರೋಹಣ ನೆರವೇರಿಸುವ ಸಮಸ್ಯೆ ಸೃಷ್ಟಿಯಾಯಿತು ಎನ್ನಲಾಗಿದೆ.


ಈ ಬಗ್ಗೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ತಾಲೂಕು ಆಡಳಿತವನ್ನು ಪ್ರಶ್ನಿಸಿದಾಗ ಕ್ಷೇತ್ರದ ಜನಪ್ರತಿನಿಧಿಗಳಿಂದ ಕೆಲವು ಶಾಲೆಯವರು ಒತ್ತಡ ಹೇರಿಸಿದ್ದಾರೆ. ಇದರಿಂದಾಗಿ ಗೊಂದಲ ಉಂಟಾಗಿದೆ ಎಂದು ಬೇಜವಾಬ್ದಾರಿಯ ಉತ್ತರವನ್ನು ನೀಡಿದ್ದಾರೆ. ಇವರು ಖಾಸಗಿ ಶಾಲೆಯ ಒತ್ತಡಕ್ಕೆ ಮಣಿದಿದ್ದಾರೆಯೇ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದೆ? ಇಲ್ಲವೇ ಜನಪ್ರತಿನಿಧಿಗಳು ಗಣರಾಜ್ಯೋತ್ಸವ ಆಚರಣೆಯಲ್ಲಿಯೂ ಮೂಗು ತೂರಿಸಿ ಭವಿಷ್ಯದಲ್ಲಿ ದೇಶದ ಜವಾಬ್ದಾರಿ ಹೊರುವ ವಿದ್ಯಾರ್ಥಿಗಳ ಮೇಲೆ ತಾರತಮ್ಯ ಎಸಗಲು ಮುಂದಾಗಿದ್ದಾರೆಯೇ? ಎನ್ನುವ ಪ್ರಶ್ನೆಗಳು ತೇಲಿ ಬಂದವು.
ಗಣರಾಜ್ಯೋತ್ಸವದ ಪತಸಂಚಲನದಲ್ಲಿ ವಿಜೇತರಾದವರಿಗೆ ಬಹುಮಾನದ ಫಲಕ ವಿತರಿಸಿ ನಗದು ಹಣವನ್ನು ನೀಡದೇ ಇರುವ ಕುರಿತು ಶಾಲೆಯ ದೈಹಿಕ ಶಿಕ್ಷಕರೊಬ್ಬರು ಕಾರ್ಯಕ್ರಮ ಮುಗಿದ ನಂತರ ಕೇಳುತ್ತಾ ಬಂದಿದ್ದರೆ, ಆಯೋಜಕರೆಲ್ಲರೂ ಅಲ್ಲಿಂದ ತೆರಳಿದ್ದರೂ ಎನ್ನುವುದು ಕೂತೂಹಲ.