ದಾಂಡೇಲಿಯಲ್ಲಿ ಸಂಭ್ರಮ ಸಡಗರದಿಂದ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ದಾಂಡೇಲಿ : ನಗರದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಇಂದು ಶುಕ್ರವಾರ ಆಚರಿಸಲಾಯಿತು.

ತಾಲೂಕಾಡಳಿತ ಮತ್ತು ನಗರಾಡಳಿತದ ಆಶ್ರಯದಡಿ ಹಳೆ ನಗರಸಭೆ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರಸಭೆಯ ಪೌರಾಯುಕ್ತರಾದ ಆರ್ ಎಸ್ ಪವಾರ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಆರ್ ಎಸ್ ಪವಾರ್ ಅವರು ಅನೇಕತೆಯಲ್ಲಿ ಏಕತೆಯೊಂದಿಗೆ, ಪರಸ್ಪರ ಒಗ್ಗಟ್ಟು ಸೌಹಾರ್ದತೆಯಿಂದ ಜೀವನ ನಡೆಸುವುದರ ಜೊತೆಗೆ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಅಂಬೇಡ್ಕರ್ ಅವರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್, ಡಿವೈಎಸ್ಪಿ ಶಿವಾನಂದ್ ಕಟಗಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್ ವಾಸರೆಯರವರು ಉಪಸ್ಥಿತರಿದ್ದರು.

ಶಿಕ್ಷಕ ಸೀತಾರಾಮ್ ನಾಯ್ಕ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ನಗರ ಸಭೆಯ ಅಧಿಕಾರಿಗಳಾದ ಮೈಕಲ್ ಫರ್ನಾಂಡೀಸ್, ಬಾಳು ಗವಸ ಸಹಕರಿಸಿದರು. ಕಾರ್ಯಕ್ರಮದಲ್ಲಿ ನಗರ ಸಭೆಯ ಸದಸ್ಯರು, ಶಾಲಾ /ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.