ಯಲ್ಲಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮ


ಯಲ್ಲಾಪುರ ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ ಮತದಾರರಲ್ಲಿ ಮತದಾನದ ಮೌಲ್ಯ, ಮಹತ್ವದದ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕು. ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗದೇ ನಿರ್ಭೀತವಾಗಿ ಮತದಾನ ಮಾಡಲು ಜಾಗೃತಿಗೊಳಿಸಲು ಮತದಾರರ ದಿನ ಆಚರಿಸಲಾಗುತ್ತದೆ ಎಂದರು.

ನ್ಯಾಯವಾದಿ ಆರ್.ಕೆ.ಭಟ್ಟ ಮತದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ ಎಂ. ಗುರುರಾಜ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.

ತಾಲೂಕು ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ, ಕಾರ್ಯದರ್ಶಿ ಗಣೇಶ ಪಾಟಣಕರ್, ಬಿಇಒ ಎನ್.ಆರ್.ಹೆಗಡೆ, ತಾ.ಪಂ ಪ್ರಭಾರಿ ಇಒ ನಾಗರಾಜ ನಾಯ್ಕ, ಅಪರ ಸರ್ಕಾರಿ ವಕೀಲ ಎನ್.ಟಿ.ಗಾಂವ್ಕರ ಇತರರಿದ್ದರು. ಶ್ರೀಧರ ಮಡಿವಾಳ ನಿರ್ವಹಿಸಿದರು.