ಸಂಸದ ಅನಂತ ಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಯಲ್ಲಾಪುರದಲ್ಲಿ ಪ್ರತಿಭಟನೆ

ಯಲ್ಲಾಪುರ: ಸಂಸದ ಅನಂತ ಕುಮಾರ ಹೆಗಡೆ ಅವರ ಹೇಳಿಕೆಯನ್ನು ಖಂಡಿಸಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಧಿಕ್ಕಾರ ಕೂಗಿದರು. ನಂತರ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕಾರ, ಸಂಸದರು ಸಭ್ಯತೆಯ ಎಲ್ಲೆ ಮೀರಿ, ಮಾತನಾಡುವುದನ್ನು ಬಿಡಬೇಕು. ಸಂಸ್ಕೃತಿಯ ಬಗೆಗೆ ಉಪದೇಶ ಮಾಡುವ ಇವರು ಅದಕ್ಕೆ ತಕ್ಕುದಾಗಿ ವರ್ತಿಸದೇ ಸಿ ಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿ, ಅವಹೇಳನ ಮಾಡಿದ್ದಾರೆ. ಅವರ ಹೇಳಿಕೆ ಕಾಂಗ್ರೆಸ್ ಖಂಡಿಸುತ್ತದೆ. ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದೇ ಕೇವಲ ವಿವಾದಾತ್ಮಕ ಹೇಳಿಕೆ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ಟೀಕಿಸಿದರು.
ಕಾಂಗ್ರೆಸ್ ನ ಸೇವಾದಳ ಸೆಲ್ ನ ಜಿಲ್ಲಾಧ್ಯಕ್ಷ ಪ್ರಶಾಂತ ಸಭಾಹಿತ ಮಾತನಾಡಿ, ಕುಂಭಕರ್ಣನಂತೆ ಮಲಗಿದ್ದ ಸಂಸದರು ಚುನಾವಣೆ ಸಮೀಪಿಸುತ್ತಿದ್ದಂತೆ ಎದ್ದಿದ್ದಾರೆ. ಕಾರ್ಯಕರ್ತರು ಹುಲಿ ಬಂತು ಎಂದು ಅರಚುತ್ತಿದ್ದಾರೆ. ಈ ಹುಲಿಗೆ ಚುನಾವಣೆ ಸಮಯಕ್ಕೆ ತಾನಾಗಿಯೇ ಎಚ್ಚರವಾಯಿತೊ ಅಥವಾ ಚುನಾವಣೆ ಸಮಯಕ್ಕೆ ಸರಿಯಾಗಿ ತನ್ನನ್ನು ಎಬ್ಬಿಸಿ ಎಂದು ಕಾರ್ಯಕರ್ತರಿಗೆ ಹೇಳಿಯೇ ಮಲಗಿತ್ತೊ ಎಂದು ಲೇವಡಿ ಮಾಡಿದರು. ಪ್ರಧಾನಿಯವರೇ ಜಿಲ್ಲೆಗೆ ಬಂದಾಗಲೂ ಎದ್ದು ಬಾರದ ಸಂಸದರು ಈಗ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ದಿಲೀಪ ರೊಖಡೆ, ಪಕ್ಷದ ಮುಖಂಡರಾದ ಸರಸ್ವತಿ ಗುನಗಾ, ಅನಿಲ್ ನಾಯ್ಕ ಚಿನ್ನಾಪುರ, ಲಾರೆನ್ಸ್ ಸಿದ್ದಿ, ಕೈಸರ್ ಸೈಯದ್ ಅಲಿ, ವಿಲ್ಸನ್ ಫರ್ನಾಂಡೀಸ್, ವಿ.ಜಿ.ಭಾಗ್ವಗ, ಎನ್.ಎನ್.ಹೆಬ್ಬಾರ್ ಇತರರಿದ್ದರು.