ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನದ ಲೋಗೊ ಬಿಡುಗಡೆ.

ಯುವಜನರಿಗೆ ಉದ್ಯೋಗದ ಹಕ್ಕು ಖಾತ್ರಿಪಡಿಸಿ: ಬಸವರಾಜ ಪೂಜಾರ ಆಗ್ರಹ.

ದಾಂಡೇಲಿ: ದೇಶದ ಅತಿ ದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನರನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಗೊಳಿಸಬೇಕಾದ ಸರಕಾರಗಳು ಯುವಜನರಿಗೆ ಹುಸಿ ಭರವಸೆ ನೀಡಿ ವಂಚಿಸುತ್ತಲೇ ಇವೆ. ಶಿಕ್ಷಣ, ಉದ್ಯೋಗ ಸಿಗದೇ ಹತಾಶೆಗೊಂಡಿರುವ ಯುವಜನತೆಗೆ ಆಳುವ ವರ್ಗ ಪರಿಹಾರ ಒದಗಿಸುವ ಬದಲು ಅವರ ಮನಸ್ಸಿನಲ್ಲಿ ಜಾತಿ, ಧರ್ಮಾಂಧತೆ ಭಿತ್ತುತ್ತಿರುವುದು ಅಪಾಯಕಾರಿಯಾದ ಬೆಳವಣಿಗೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ನಗರದ ಸಿಐಟಿಯು ಕಛೇರಿಯಲ್ಲಿ ಶನಿವಾರ ಮಧದಯಡಹ್ನ 12.30 ಗಂಟೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಲೋಗೊ ಅನಾವರಣಗೊಳಿಸಿ ಮಾತನಾಡಿದರು. ಈ ಹಿನ್ನೆಲೆಯಲ್ಲಿ “ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ” ಘೋಷಣೆಯಡಿ ಡಿವೈಎಫ್ಐ 12 ನೇ ರಾಜ್ಯ ಸಮ್ಮೇಳನವನ್ನು 2024 ಫೆಬ್ರವರಿ 25, 26, 27 ರಂದು ಮೂರು ದಿನಗಳ ಕಾಲ ಮಂಗಳೂರಿನಲ್ಲಿ ಹಮ್ಮಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಈ ಮೇಲ್ಕಂಡ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಹಾಗೂ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.

ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ ಸ್ಯಾಮಸನ್ ಅವರು ಮಾತನಾಡಿ, ರಾಜ್ಯದಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿದ್ದು ಅವುಗಳ ಭರ್ತಿ ಮಾಡಲು ಹಾಗೂ ಆದ್ಯತಾ ಕ್ಷೇತ್ರವಾರು ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ ಸರಕಾರ ಕೈಗೊಳ್ಳುವ ಬಜೆಟ್ ಗಳು ಯಾವುದೇ ಚಕಾರ ಎತ್ತದಿರುವುದು ಯುವಜನರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ ಇಮ್ರಾನ್ ಖಾನ್, ಕಾಂತರಾವ್, ಸಲ್ಮೊನ್ ರಾಜ್, ಮಹಮದ್ ಗೌಸ್ ಬಿಚ್ಚುನವರ, ಸುರೇಂದ್ರ ಕಾಂಬಳೆ, ಇರ್ಷಾದ್ ರಾಣೇಬೆನ್ನೂರು, ಸಾಹಿಲ್ ಶೇಖ್, ಅಭಿದ್ ಆರ್, ಇರ್ಷಾದ್ ಬೈಲೂರು, ಪ್ರಸಾದ್ ಹಂಡಿ, ನಯೀಮ್ ಜಮಾದಾರ್, ದಾಮೋದರ್ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.