ಭಟ್ಕಳ: ಹರಕೆಯಲ್ಲಿ ವಿವಿಧ ಬಗೆಯನ್ನು ಕಂಡಿರುತ್ತಿರಿ ಕೇಳಿರುತ್ತೀರಿ. ಆದರೆ ಇವೆಲ್ಲದಕ್ಕು ಪ್ರಮುಖ ಆಕರ್ಷಣೆ ಹಾಗೂ ಅಪರೂಪದ ಹರಕೆಯೂ ತಾಲೂಕಿನ ಹೆಬಳೆಯ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಯಲ್ಲಿ ಪ್ರತಿ ವರ್ಷದಂತೆ ನಡೆಯಲಿದ್ದು ಭಕ್ತರು ಶೇಡಿ ಮರವನ್ನು ಏರುವ ಹರಕೆ ಈಜಾತ್ರೆಯ ವಿಶೇಷವಾಗಿದ್ದು, ಎರಡು ದಿನಗಳ ಕಾಲ ನಡೆಯುವ ಜಾತ್ರೆಯೂ ವಿಧ್ಯುಕ್ತವಾಗಿ ಮಕರ ಸಂಕ್ರಮಣದ ದಿನವಾದ ಸೋಮವಾರದಂದು ಆರಂಭಗೊಂಡಿದೆ.
ಆರಂಭಗೊಂಡ ಶೇಡಬರಿ ಜಾತ್ರಾ ಮಹೋತ್ಸವೂ ಜಿಲ್ಲೆಯಲ್ಲಿಯೇ ಪ್ರಸಿದ್ಧತೆಯನ್ನು ಹಾಗೂ ಅಪರೂಪದ್ದಾಗಿದ್ದು, ವಿಶೇಷ ರೀತಿಯಲ್ಲಿ ಭಕ್ತರು ಶೇಡಿ ಮರವನ್ನು ಏರಿ ಸಿಂಗಾರವನ್ನು ಎಸೆಯುವುದು ರೂಢಿಯಲ್ಲಿದೆ. ಇನ್ನುಳಿದಂತೆ
ಬೇರೆ ರೀತಿಯ ಹರಕೆ, ಕಾಣಿಕೆ ಹಾಗೂ ಪೂಜೆಗಳಿಂದಲೇ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಜಾತ್ರೆಗೆ ಬರುವ ಸಹಸ್ರಾರು ಭಕ್ತರು ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ, ಕಾಣಿಕೆ ಹಾಗೂ ಪೂಜೆಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ. ಇಲ್ಲಿನ ಹರಕೆ ಹೊತ್ತವರಿಗೆ ಅವರ ಬೇಡಿಕೆ ಈಡೇರಿರುವ ಸಾಕಷ್ಟು ಉದಾಹರಣೆಗಳಿದ್ದು, ಸಂತಾನ ಭಾಗ್ಯ, ಸಿಡುಬು ಸೇರಿದಂತೆ ಸಾಕಷ್ಟು ಕಾಯಿಲೆಗೆ ಇಲ್ಲಿನ ದೇವರ ಶಕ್ತಿಯಿಂದ ಕಡಿಮೆಯಾಗಿ ಸಂತಸದಿಂದ ಭಕ್ತರು ಜೀವನ ನಡೆಸುತ್ತಾ ಸೇವೆಯನ್ನು ಮುಂದುವರೆಸಿದ್ದಾರೆ.
ಜಾತ್ರೆಯ ದಿನದಂದು ತಾಲೂಕಿನಿಂದಷ್ಟೇ ಅಲ್ಲದೇ ಹೆಚ್ಚು ಕಡಿಮೆ ರಾಜ್ಯದ ನಾನಾ ಮೂಲೆಯಿಂದ ಭಕ್ತರು ಆಗಮಿಸಿ ಇಲ್ಲಿ ಹರಕೆ, ಕಾಣಿಕೆಗಳನ್ನು ಸಲ್ಲಿಸುವದುಂಟು. ಶೇಡಿಮರ ಏರುವ ಹರಕೆ ಹೊತ್ತವರು ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದ ಎದುರಿನಲ್ಲಿ ಶೃಂಗರಿಸಿದ್ದ ಶೇಡಿಮರದಲ್ಲಿ ಕುಳಿತು ಮೂರು ಸುತ್ತು ತಿರುಗಿದ ಬಳಿಕ ಶೇಡಿ ಮರದ ಮೇಲೆ ಕುಳಿತು ಅವರು ತಾವು ತಂದಿದ್ದ ಸಿಂಗಾರ ಹೂವು, ಬಾಳೆ ಹಣ್ಣನ್ನು ಕೆಳಗಡೆಯಿರುವ ಭಕ್ತರ ಮೇಲೆ ಎಸೆಯುವುದು ವಾಡಿಕೆ. ಹಾಗೂ ಇದು ದೇವರ ಪ್ರಸಾದವೆಂದು ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ. ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹೇಳಿಕೆ ಮಾಡಿಕೊಂಡರೆ, ಆ ಕಷ್ಟಗಳು ಪರಿಹಾರವಾಗಿ ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಮಹಾಸತಿ ದೇವಿಯ ಭಕ್ತರಲ್ಲಿ ಇದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ.
ಅದರಂತೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಮಹಾಸತಿ ದೇವಸ್ಥಾನದ ಎದುರು ಅಲಂಕೃತಗೊಳಿಸಿ, ಸಿದ್ಧಪಡಿಸಿದ್ದ ಶೇಡಿ ಮರವನ್ನು ಏರಿ ಮೂರು ಸುತ್ತು ತಿರುಗಿ, ತಾವು ತಂದಿದ್ದ ಹೂವು, ಹಣ್ಣನ್ನು ಕೆಳಗೆ ನಿಂತಿದ್ದ ಭಕ್ತರ ಮೇಲೆ ಎಸೆದರು.
ಅದನ್ನು ಭಕ್ತರು ಪ್ರಸಾದವೆಂದು ಸ್ವೀಕರಿಸಿದರು. ಈ ಹರಕೆ ದೃಶ್ಯ ನೋಡಲು ನೂರಾರು ಜನರು ನೆರೆದಿದ್ದರು.
ದೇವಸ್ಥಾನದ ಆಡಳಿತ ಮಂಡಳಿಯಿಂದ ಎರಡೂ ದಿನಗಳ ಕಾಲ ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಮಾಡಿಕೊಡಲಾಯಿತು. ಜಾತ್ರೆಯ ಅಂಗವಾಗಿ ಭಕ್ತರು ಶೆಡಬರಿ ಜಟಕಾ ಮಹಾಸತಿ ದೇವಿಗೆ ಹಾಗೂ ಪರಿವಾರ ದೇವರಿಗೆ ಸಿಂಗಾರದ ಹೂವಿನ ವಿಶೇಷಪೂಜೆ, ಕಾಣಿಕೆಗಳನ್ನು ಸಲ್ಲಿಸಿ, ತೀರ್ಥಪ್ರಸಾದ ಸ್ವೀಕರಿಸಿದರು