ಏರ್‌ಪೋರ್ಟ್‌ ವಿಚಾರದಲ್ಲಿ ಸಿದ್ದು ವಿರುದ್ಧ ಗುಡುಗಿದ ಸಂಸದ ಅನಂತ್‌ ಕುಮಾರ್‌ ಹೆಗಡೆ

ಭಟ್ಕಳ : ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರು ಶುಕ್ರವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಂಸದ ಅನಂತ ಕುಮಾರ ಹೆಗಡೆ ತುಂಬಾ ದಿನಗಳ ನಂತರ ನಿಮ್ಮೆಲ್ಲರ ಭೇಟಿ ಆಗುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದಲೂ ಭೇಟಿಯಾಗಲು ಅನಾರೋಗ್ಯ ಮತ್ತು ವೈಯಕ್ತಿಕ ಕಾರಣದಿಂದ ಸಾಧ್ಯವಾಗಲಿಲ್ಲ.

ಇನ್ನು ರಾಮ ಜನ್ಮಭೂಮಿ ಸಂಕಲ್ಪಕ್ಕೆ ಎಲ್ಲರೂ ತೊಡಗಿಕೊಳ್ಳಬೇಕು. ಜನವರಿ 22 ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗುವ ರಾಮ ಮಂದಿರವು ಔಪಚಾರಿಕ ಸಂಘರ್ಷದ ಗೆಲುವಾಗಿದೆ. ಹಿಂದೂ ಕಾರ್ಯಕರ್ತರು, ಕರ ಸೇವಕರ ಬಲಿದಾನ ಹಾಗೂ ಹೋರಾಟದ ಪ್ರತಿಫಲವಾಗಿ ಭವ್ಯ ಮಂದಿರ ನಿರ್ಮಾಣವಾಗಿದೆ. ಹಿಂದೂ ಸಮಾಜದ ಅಜೆಂಡಾ ಇಲ್ಲಿಂದ ಪ್ರಾರಂಭವಾಗಲಿದೆ. ಈ ಹಿಂದೆ ಸೋಮನಾಥೇಶ್ವರ ದೇವಾಲಯ ಸರ್ಕಾರದ ವತಿಯಿಂದ ರಾಷ್ಟ್ರಪತಿಗಳು ನಿರ್ಮಾಣ ಮಾಡಿದ್ದರು. ಅಯೋಧ್ಯೆಯ ರಾಮಮಂದಿರವು ಹಿಂದೂ ಸಮಾಜದಿಂದ ನಿರ್ಮಾಣವಾಗಿದೆ.

ರಾಮನ ಐತಿಹಾಸಿಕ ಕುರುಹು ಇರುವುದು ತಮಿಳುನಾಡು ರಾಜ್ಯದಲ್ಲಿ. ಆದರೆ ಅಲ್ಲಿಯ ಮಂತ್ರಿಯೋರ್ವರು ರಾಮ ಗೊತ್ತಿಲ್ಲ. ಇದು ಉತ್ತರಭಾರತದ ದೇವರು ಎನ್ನುತ್ತಾರೆ. ಹಿಂದು ಸಮಾಜ ಜಾಗೃತವಾಗುತ್ತಿದೆ. 500 ವರ್ಷಗಳ ಹೋರಾಟದ ಪರಿಣಾಮ ರಾಮಮಂದಿರ ನಿರ್ಮಾಣವಾಗಿದೆ ಎಂದ ಅವರು, ಮುಂದಿನ ದಿನದಲ್ಲಿ ಸಂಗ್ರಾಮ ನಡೆಯಲಿದ್ದು, ಅದ್ಬುತ ಗೆಲುವು ನಮ್ಮ ಕ್ಷೇತ್ರದಲ್ಲಿ ಆಗಬೇಕು.
ರಾಮ ಮಂದಿರ ನಿರ್ಮಾಣ ಉದ್ಘಾಟನೆ ಭಗವಂತನ ಸಂಕಲ್ಪ. ಈ ಕಾರ್ಯಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ರು…

ದೇಶದಲ್ಲಿ ವಿರೋಧ ಪಕ್ಷವೇ ಇಲ್ಲ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ದೊಂಬರಾಟ ನಡೆಯುತ್ತಿದೆ. ಚುನಾವಣೆಯಿಂದ ಚುನಾವಣೆಗೆ ಹೆಚ್ಚಿನ ಬೆಂಬಲ ನಮ್ಮ ಕ್ಷೇತ್ರದಲ್ಲಿ ವ್ಯಕ್ತವಾಗಿದೆ. ಇಲ್ಲಿ ಅಭ್ಯರ್ಥಿ ನೋಡಿ ಮತ ನೀಡಿಲ್ಲ. ಬಿಜೆಪಿಗೆ ಮತ ನೀಡಿದ್ದು, ಮುಂದಿನ ದಿನದಲ್ಲಿ ಅಭ್ಯರ್ಥಿ ಯಾರೇ ಆದರೂ ಪಕ್ಷಕ್ಕೆ ಮತ ನೀಡಬೇಕು. ಇಲ್ಲಿಯರೆಗೆ ನೀಡಿದ ಗೆಲುವಿಗಿಂತ ಹೆಚ್ಚಿನ ಮತ ನೀಡಿ ಹೊಸ ದಾಖಲೆಯ ಗೆಲುವು ಆಗಬೇಕು. ಕಾರ್ಯಕರ್ತರ ಶ್ರಮ ಜನರ ತೀರ್ಮಾನ ಹೊಸ ದಾಖಲೆಯೊಂದಿಗೆ ಈ ಬಾರಿ ಬೆಂಬಲ ತೋರಿ, ಯಾರೆ ಅಭ್ಯರ್ಥಿಯಾದರೂ ಗೆಲುವಾಗಬೇಕು ಎಂದರು.

ಇನ್ನು ಕೆಲವು ಸೋಗಲಾಡಿಗಳು ಹೇಳುತ್ತಾರೆ ಭಾರತ ಜಾತ್ಯಾತೀತ ರಾಷ್ಟ್ರ ಎಂದು. ಅದಕ್ಕೆ ನಾನು ಒಪ್ಪುವುದಿಲ್ಲ ಭಾರತ ಒಂದು ಹಿಂದೂ ರಾಷ್ಟ್ರವಾಗಿ ಪರಿವರ್ತನೆಯಾಗಬೇಕು. ಅದಕ್ಕಾಗಿ ನಾವು ಈಗಿನಿಂದಲೇ ಬದ್ಧವಾಗಿರಬೇಕು ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಸತತ 500 ವರ್ಷಗಳ ಹೋರಾಟಗಳ ಫಲವಾಗಿ ಬಂದಿದೆ. ಹಾಗೆಯೇ ಈ ಹಿಂದೂ ರಾಷ್ಟ್ರದ ಕಲ್ಪನೆಗೆ ಈಗ ಸಂಗ್ರಾಮ ಶುರುವಾಗಿದೆ. ಈ ಸಂಗ್ರಾಮದಲ್ಲಿ ಪ್ರತಿಯೊಬ್ಬ ಹಿಂದೂ ಪಾಲ್ಗೊಳ್ಳಬೇಕು. ಈ ಕೆನರಾ ಕ್ಷೇತ್ರದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಬೇಕು. ಯಾವುದೋ ಮೂರ್ಖ ರಾಮಯ್ಯ ಹೇಳುತ್ತಾನೆಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವನಿಗೆ ದಮ್ ಇದ್ದರೆ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ. ರಾಮ ಮಂದಿರ ನಿರ್ಮಾಣ ಉದ್ಘಾಟನೆ ಭಗವಂತನ ಸಂಕಲ್ಪ. ಈ ಕಾರ್ಯಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಜಿಲ್ಲೆಗೆ ಹೊನ್ನಾವರದಲ್ಲಿ ಬಂದರು ಅಭಿವೃದ್ಧಿಗೆ ಮುಂದಾದಾಗ ಇದೇ ಜಿಲ್ಲೆಯ ಜನರು ಗಲಾಟೆ ಮಾಡಿದರು. ಪರಿಸರದ ಹೆಸರಿನಲ್ಲಿ, ಇಲ್ಲದ ಆಮೆಯ ಹೆಸರಿನಲ್ಲಿ ಪೋರ್ಟ ಕಾಮಗಾರಿ ನಿಲ್ಲಿಸಿದ್ದಾರೆ‌. ಏರ್ ಪೋಟ್ ಕಾಮಗಾರಿಗೂ ಸಹ ಕಲ್ಲು ಹಾಕಿರುವ ಜನರು ಬೇರೆ ಯಾರೋ ಅಲ್ಲ. ಸೋಗಲಾಡಿ ಅಭಿವೃದ್ಧಿಯ ಬಗ್ಗೆ ಮಾತನಾಡುವವರೇ ಆಗಿದ್ದಾರೆ. ಯಾರೋ ಪಾಪದ ಅಥವಾ ಪರದೇಶಿ ಜನರಲ್ಲ. ಮಂಕಿಯಲ್ಲಿ ಮೀನುಗಾರಿಕಾ ಹಾರ್ಬರ ಪೋರ್ಟ್ ಆಗುವ ಸಾಧ್ಯತೆ ಇದ್ದು, ಜೊತೆಗೆ ಭಟ್ಕಳದಲ್ಲಿ ನೆಹರು ಕಾಲದಲ್ಲಿ ಇದ್ದ ಪ್ರಸ್ತಾವನೆಗೆ ಜೀವ ತುಂಬಿದ್ದೇವೆ ಆದರೆ ಇಲ್ಲಿನ ಜನಸಂಖ್ಯೆಯ ಆಧಾರದ ಮೇಲೆ ಯಾರು ಸಹ ಬಂಡವಾಳಗಾರರು ಮುಂದೆ ಬರುತ್ತಿಲ್ಲ. ಶಾಂತವಾದ ಸ್ಥಳವನ್ನು ಆರಿಸಿಕೊಳ್ಳುವ ಬಂಡವಾಳಗಾರರು ಭಟ್ಕಳದ ಪರಿಸ್ಥಿತಿಗೆ ಅವರ ಬಂಡವಾಳದ ವಾಪಸ್ಸಾತಿಯ ಭರವಸೆ ಇಲ್ಲವಾಗಿದೆ ಎಂದ ಅವರು ಜ್ವಾಲಾಮುಖಿಯ ತುತ್ತ ತುದಿಯಲ್ಲಿ ಮನೆಯನ್ನು ಕಟ್ಟಲು ಹೇಗೆ ಸಾಧ್ಯ ಎಂದರು.

ಜಿಲ್ಲೆಯ ಹೊನ್ನಾವರದಲ್ಲಿ ಒಂದು ಪೋರ್ಟ ನಿರ್ಮಾಣವಾಗಿದ್ದಲ್ಲಿ ಭಟ್ಕಳದಿಂದ ಕುಮಟಾ ತನಕ ಒಂದು ನಗರವಾಗುವುದರೊಂದಿಗೆ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತಲಿತ್ತು. ಜಿಲ್ಲೆಯ ಜನರಿಗೆ ಒಂದು ಪೋರ್ಟ ಅಭಿವೃದ್ಧಿಯ ವ್ಯಾಪಕತೆಯ ಅರಿವಿಲ್ಲದೇ ಈ ಸೋಗಲಾಡಿ ಜನರು ಕಾಮಗಾರಿಗೆ ಅಡ್ಡ ಹಾಕಿ ಕಲ್ಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಪೋರ್ಟ, ಏರ್ ಪೋರ್ಟ, ರೈಲ್ವೆ, ಟೆಲಿಕಾಂ, ಹೆದ್ದಾರಿಗಳ ಅಭಿವೃದ್ಧಿಗಳನ್ನು ಹೊರತು ಪಡಿಸಿ ಸಂಸದರು ಇನ್ನೇನು ಮಾಡಬೇಕು. ಇಡೀ ರಾಜ್ಯದಲ್ಲಿ ಸಂಸದರ ನಿಧಿ ಅತೀ ಹೆಚ್ಚು ಉತ್ತರ ಕನ್ನಡ ಕ್ಷೇತ್ರಕ್ಕೆ ತಂದಿದ್ದೇನೆ. ಕೇಂದ್ರ ಸರಕಾರದಿಂದ ಯಾವೆಲ್ಲ ಯೋಜನೆಗಳು, ಸೌಲಭ್ಯಗಳು ಕ್ಷೇತ್ರದಲ್ಲಿ ಆಗಿಲ್ಲ ಎಂಬುದನ್ನು ಯಾರಾದರು ಸಾಬೀತು ಪಡಿಸಲಿ. ಧಮ್ ಇದ್ದರೇ ಮುಂದೆ ಬಂದು ಹೇಳಲಿ ಎಂದು ಪ್ರಶ್ನಿಸಿದರು…

ಇನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತಾಗಿ ನನ್ನ ಬಳಿ ಚರ್ಚೆ ಬರುತ್ತಲಿದೆ. ಆದರೆ ಜಿಲ್ಲೆಯ ಜನರ ಗಮನಕ್ಕೆ ಈಗಾಗಲೇ ನಿಟ್ಟೆ ಎಂಬ ಸಂಸ್ಥೆ ಸಹ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದೆ ಬಂದಿದ್ದು ಆದರೆ ಜಾಗವನ್ನು ರಾಜ್ಯ ಸರಕಾರ ಗುರುತಿಸಬೇಕಾಗಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೂ ಸಂಸದ ನಾನು ಮನವಿ ಮಾಡಿದ್ದು ಇಲ್ಲಿಯ ತನಕ ಜಾಗ ಹುಡುಕಲು ಸಾಧ್ಯವಾಗಿಲ್ಲ. ಬೆಂಗಳೂರಿಗಿಂತ ಹೆಚ್ಚಿನ ಜಾಗದ ಮೌಲ್ಯ ಜಿಲ್ಲೆಯಲ್ಲಿ ಅತೀ ಹೆಚ್ಚಿದೆ ಎಂದರು.

ಆಸ್ಪತ್ರೆಯ ನಿರ್ಮಾಣ ಹೇಗೆ ಎಲ್ಲಿ ಯಾವ ರೀತಿ ಮಾಡಬೇಕೆಂಬ ಕಲ್ಪನೆ ಇಲ್ಲದೇ ಎಲ್ಲರು ಮಾತನಾಡುವವರಾಗಿದ್ದಾರೆ. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಭಟ್ಕಳದ ಶಾಸಕರೊಂದಿಗೆ ಅವರೊಂದಿಗಿನ ಕಮಂಗಿಗಳು ಅವರಂತೆ ಹೋ ಎಂದು ಕೂಗುವುದು ಬಿಟ್ಟರೆ ಅವರಲ್ಲಿ ಆಸ್ಪತ್ರೆಯ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ ಎಂದರು.

ಜಿಲ್ಲೆಯಲ್ಲಿ ಸಿವಿಲ್ ಏರ್ ಪೋರ್ಟ್ ನಿರ್ಮಾಣಕ್ಕೆ 80 ಎಕರೆ ಜಾಗದ ಅವಶ್ಯಕತೆ ಇದೆ. ಅದಕ್ಕಾಗಿ ಕೇಂದ್ರದಿಂದ ಹಣವನ್ನು ಸಹ ರಾಜ್ಯ ಸರಕಾರಕ್ಕೆ ಈಗಾಗಲೇ ನೀಡಲಾಗಿದೆ. ಆದರೆ ಮತ್ತೆ ಹೆಚ್ಚುವರಿ ಜಾಗದ ಅವಶ್ಯಕತೆ ಇರುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದು ಅದಕ್ಕಾಗಿ 6 ಕೋಟಿ ರಾಜ್ಯ ಸರಕಾರ ಬಿಡುಗಡೆ ಮಾಡಿದರೆ, ಏರ್ ಪೋರ್ಟ ಕಾಮಗಾರಿ ಆರಂಭವಾಗಲಿದೆ.
ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗಮನಕ್ಕೆ ಬರಲಾಗಿದ್ದು ಇದಕ್ಕೆ ಸಹಮತ ನೀಡಿದ್ದರು ಸಹ, ಯಾವ ಸಮಯದಲ್ಲಿ ಅವರು ತಲೆ ಹೇಗೆ ಬದಲಾಗುತ್ತದೆ ಎಂಬುದು ಗೊತ್ತಿಲ್ಲ. ಅಮಾವಾಸ್ಯೆ ಹುಣ್ಣಿಮೆಯನ್ನಾದರು ತಿಳಿಯಬಹುದು ಆದರೆ ಗ್ರಹಣವು ಯಾವಾಗ ಬರುತ್ತದೆ ಎಂದು ತಿಳಿಯಲು ಅಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ಸುಬ್ರಾಯ ದೇವಾಡಿಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಜಿಲ್ಲಾ ಉಪಾಧ್ಯಕ್ಷ ಉಮೇಶ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ಶ್ರೀಕಾಂತ್ ನಾಯ್ಕ, ಭಾಸ್ಕರ ದೈಮನೆ ಸೇರಿದಂತೆ ಸುಮಾರು ನೂರಾರು ಕಾರ್ಯಕರ್ತರು ಇದ್ದರು.