ಅಂಕೋಲಾ : ನಡೆದುಕೊಂಡ ಹೋಗುತ್ತಿರುವಾಗ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ -66ರ ಅಂಚಿನ ಪೀಕಾಕ್ ಬಾರ್ ಸಮೀಪದ ಕೊಟೇವಾಡ ಬಳಿ ಸೋಮವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಪಟ್ಟಣದ ಸ್ವಪ್ನಾ ಹೊಟೇಲ್ ಹಿಂಭಾಗದ ನಿವಾಸಿ ಲಕ್ಷ್ಮೀ ಗೋವಿಂದ ನಾಯಕ(65) ಮೃತರು. ಲಕ್ಷ್ಮೀ ಅವರು ಮುಂಜಾನೆ 6.30ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಚಿನ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕುಮಟಾ ಕಡೆಯಿಂದ ಕಾರವಾರದ ಕಡೆಗೆ ಬರುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ಪಕ್ಕದ ಗಟಾರಕ್ಕೆ ಬಿದ್ದಿದ್ದು ತಲೆಗೆ ಮತ್ತು ದೇಹದ ಇತರೆ ಭಾಗಗಳಿಗೆ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಅತಿವೇಗವಾಗಿ ವಾಹನ ಚಾಲನೆ ಮಾಡಿದ ಚಾಲಕ ಕಾರವಾರದ ಮಯೂರ್ ಮದನ ಅರ್ಗೇಕರ ವಿರುದ್ಧ ದೂರು ದಾಖಲಾಗಿದೆ.
ಮುಂಜಾನೆ ವೇಳೆ ಅಪಘಾತ : ಎಚ್ಚರಿಕೆ ಅಗತ್ಯ
ತಾಲ್ಲೂಕಿನಲ್ಲಿ ಮುಂಜಾನೆ ವಾಕಿಂಗ್ ತೆರಳುವ ಅವಧಿಯಲ್ಲಿ ಅಪಘಾತ ಸಂಭವಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಕಳೆದ ವರ್ಷ ಇಲ್ಲಿನ ಬಡಗೇರಿಯಲ್ಲಿ ಮುಂಜಾನೆ ವಾಕಿಂಗ್ ತೆರಳಿದ ವೇಳೆಯಲ್ಲಿ ಗರ್ಭಿಣಿಯೊಬ್ಬರು ವಾಹನ ಬಡಿದು ಸಾವನ್ನಪ್ಪಿದ್ದರು. ಇತ್ತೀಚಿಗೆ ತಾಲ್ಲೂಕಿನ ಅವರ್ಸಾದಲ್ಲಿಯೂ ವಾಕಿಂಗ್ ತೆರಳಿದ ವೇಳೆಯಲ್ಲೇ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಸೋಮವಾರ ಜರುಗಿದ ಘಟನೆ ಮೂರನೇ ಪ್ರಕರಣವಾಗಿದೆ. ಹಾಗಾಗಿ ರಸ್ತೆಯ ಅಂಚಿನಲ್ಲಿ ವಾಕಿಂಗ್ ತೆರಳುವವರು ಎಚ್ಚರ ವಹಿಸುವ ಅಗತ್ಯವಿದೆ.