ಯಲ್ಲಾಪುರದ ಗ್ರಾಮದೇವಿ ದೇವಸ್ಥಾನದ ರಂಗಮಂದಿರದಲ್ಲಿ ನಾಟ್ಯವಂದನ ಸಮಾರಂಭ – ಕಾರ್ಯಕ್ರಮ ಉದ್ಘಾಟಿಸಿದ ಪ್ರಮೋದ ಹೆಗಡೆ

ಭಾರತೀಯ ಕಲಾ ಪ್ರಕಾರಗಳಲ್ಲಿ ಗುರು-ಶಿಷ್ಯ ಪರಂಪರೆ ಗಟ್ಟಿಯಾಗಿ ನೆಲೆಯೂರಿದೆ. ಮಕ್ಕಳ‌ ಭವಿಷ್ಯ ರೂಪಿಸುವಲ್ಲಿ ಈ ಸಂಸ್ಕಾರ ಕಾರಣವಾಗುತ್ತದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಗ್ರಾಮದೇವಿ ದೇವಸ್ಥಾನದ ರಂಗಮಂದಿರದಲ್ಲಿ ಭಾರತಿ ನೃತ್ಯ ಕಲಾ ಕೇಂದ್ರ ಸಮಿತಿ ಯಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಟ್ಯವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಯಲ್ಲಾಪುರದಲ್ಲಿ ವಿವಿಧ ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿದ್ದು, ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದೆ. ಇದು ಹೀಗೆ ಮುಂದುವರಿಯಬೇಕು. ಅದಕ್ಕೆ ಇಂತಹ ಕಲಾ ಕೇಂದ್ರಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.
ಸುಜ್ಞಾನ ಸೇವಾ ಫೌಂಡೇಷನ್ ಅಧ್ಯಕ್ಷ ಜಿ.ಎನ್.ಭಟ್ಟ ತಟ್ಟಿಗದ್ದೆ ಮಾತನಾಡಿ, ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ಗುಪ್ತಗಾಮಿನಿಯಾಗಿ ನಮ್ಮೊಳಗೆ ಹಾಸುಹೊಕ್ಕಾಗಿದೆ. ಅದನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಇಂತಹ ನೃತ್ಯ ಕೇಂದ್ರಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಅಂಕ ಗಳಿಕೆಯಿಂದ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿಲ್ಲ. ಭಾರತೀಯ ಪರಂಪರೆಯ ಕಲೆಗಳನ್ನು ಮಕ್ಕಳಿಗೆ ಕಲಿಸಿದರೆ ಉತ್ತಮ ಸಂಸ್ಕಾರದೊಂದಿಗೆ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಭಾರತೀಯ ಕಲೆಗಳಿಗೆ ಮನಸ್ಸನ್ನು ಅರಳಿಸುವ ಶಕ್ತಿಯಿದೆ. ಮಾನಸಿಕ, ಶಾರೀರಿಕ ವಿಕಾಸಕ್ಕೆ ಕಲೆ ಅನಿವಾರ್ಯ. ಅದರಲ್ಲಿ ಮಕ್ಕಳನ್ನು ತೊಡಗಿಸುವ ಬಗೆಗೆ ಪಾಲಕರು ಕಾರ್ಯೋನ್ಮುಖವಾಗಬೇಕು ಎಂದರು.
ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ಭಾರತಿ ನೃತ್ಯ ಕಲಾ ಕೇಂದ್ರ ಸಮಿತಿಯ ವಿ.ಟಿ.ಹೆಗಡೆ, ಸುಮಾ ವೆಂಕಟರಮಣ ಉಪಸ್ಥಿತರಿದ್ದರು. ನಿರ್ಮಲಾ ಭಾಗ್ವತ ಸ್ವಾಗತಿಸಿದರು. ಲಕ್ಷ್ಮೀ ಭಟ್ಟ ಚಿಮ್ನಳ್ಳಿ ನಿರ್ವಹಿಸಿದರು.
ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನಡೆದ ಶಾಸ್ತ್ರೀಯ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ನಟವಾಂಗದಲ್ಲಿ ವಿದುಷಿ ಸುಮಾ ವೆಂಕಟರಮಣ, ಹಾಡುಗಾರಿಕೆಯಲ್ಲಿ ವಾಣಿ ಉಡುಪಿ, ಮೃದಂಗದಲ್ಲಿ ಡಾ.ಗೋಪಿಕೃಷ್ಣ, ವಾಯೋಲಿನ್ ನಲ್ಲಿ ಶಂಕರ ಕಬಾಡಿ, ರಿದಂ ಪ್ಯಾಡ್ ನಲ್ಲಿ ರಾಘವೇಂದ್ರ ರಂಗದೋಳ ಭಾಗವಹಿಸಿದ್ದರು.