ಅಂಕೋಲಾ: ರಾಮ ಮಂದಿರ ಉದ್ಘಾಟನೆಯ ನಿಮಿತ್ತ ಗ್ರಾಮಸ್ಥರಿಗೆ ಮಂತ್ರಾಕ್ಷತೆ ಹಂಚಿಕೆ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ದೇವಸ್ಥಾನದ ಆವರಣದಲ್ಲಿಯೇ ಹಲ್ಲೆ ಮಾಡಿರುವ ಕುರಿತು ವ್ಯಕ್ತಿಯೋರ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ ಹಿಲ್ಲೂರಿನ ತಿಂಗಳಬೈಲ್ ನಿವಾಸಿ ಪ್ರದೀಪ ಮಾಣೆಶ್ವರ ನಾಯಕ (35) ಅವರ ಮೇಲೆ ದೂರು ದಾಖಲಾಗಿದೆ. ಇದೇ ಗ್ರಾಮದ ದತ್ತಾತ್ರೇಯ ಗಣಪತಿ ಹೆಗಡೆ ದೂರು ದಾಖಲಿಸಿದ್ದಾರೆ.
ದತ್ತಾತ್ರೇಯ ಗಣಪತಿ ಹೆಗಡೆಯವರು ತಿಂಗಳಬೈಲ್ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯ ಪ್ರಯುಕ್ತ ಬಂದಿರುವ ಮಂತ್ರಾಕ್ಷತೆಯನ್ನು ಗ್ರಾಮಸ್ಥರಿಗೆ ಹಂಚುವ ಸಲುವಾಗಿ ದೇವಸ್ಥಾನದ ಹೊರ ಆವರಣದಲ್ಲಿ ಸಿದ್ಧತೆ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪ್ರದೀಪ ನಾಯಕ, ಅವ್ಯಾಚ ಶಬ್ದಗಳಿಂದ ನಿಂದಿಸಿ ಗಣಪತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮತ್ತೊಮ್ಮೆ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ತಪ್ಪಿಸಲು ಹೋದ ದೇವಸ್ಥಾನ ಸಮಿತಿ ಸದಸ್ಯ ಸಚಿತ ಗೋವಿಂದ್ರಾಯ ನಾಯಕ ಅವರ ತಲೆಯ ಮೇಲೆ ಕಲ್ಲಿನಿಂದ ಹಾಗೂ ಬೆನ್ನಿನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ತಡೆಯಲು ಮುಂದಾದ ನಾಗರಾಜ ಗಣಪತಿ ಹೆಗಡೆ ಅವರ ಮೇಲೂ ಹಲ್ಲೆ ನಡೆಸಿದ್ದಾಗಿ ಮತ್ತು ಮತ್ತು ಜೀವ ಬೆದರಿಕೆ ಒಡ್ಡಿದ್ದಾಗಿ ದತ್ತಾತ್ರೇಯ ಹೆಗಡೆ ದೂರಿದ್ದಾರೆ.