ಯುವಜನಾಂಗಕ್ಕೆ ಮಾಹಿತಿ ಮತ್ತುತರಬೇತಿಯ ಕೊರತೆ ಇದೆ : ಡಾ. ಬಿ. ಎನ್. ಅಕ್ಕಿ

ದಾಂಡೇಲಿ : ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಖಾಸಗಿ ವಲಯಗಳಲ್ಲಿ ಅಸಂಖ್ಯಾ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು, ಅವುಗಳ ಬಗ್ಗೆ ಮಾಹಿತಿಯ ಕೊರತೆ ಹಾಗೂ ಪರೀಕ್ಷೆಗಳಿಗೆ ತರಬೇತಿಯ ಕೊರತೆಯಿಂದ ಯುವಕರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ‌. ವಿದ್ಯಾಸಂಸ್ಥೆಗಳು ಪಠ್ಯಬೋಧನೆಯ ಜೊತೆಗೆ ಮಾಹಿತಿ ಹಾಗೂ ತರಬೇತಿಗಳನ್ನು ನೀಡುವ ಕೇಂದ್ರಗಳಾಗಬೇಕು ಎಂದು ಇತಿಹಾಸ ತಜ್ಞ ಡಾ. ಬಿ. ಎನ್. ಅಕ್ಕಿಯವರು ಅಭಿಪ್ರಾಯಪಟ್ಟರು.

ಅವರು ಶನಿವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಕೋಶ ಹಾಗೂ ಧಾರವಾಡದ ಗುಡ್‌ಫ್ಯೂಚರ್ ಅಕಾಡೆಮಿಗಳ ಸಹಯೋಗದಲ್ಲಿ ಜರುಗಿದ “ಕೇಂದ್ರ ಸರ್ಕಾರದಲ್ಲಿ ಉದ್ಯೋಗಾವಕಾಶಗಳು ಎಂಬ ವಿಷಯದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ. ಡಿ. ಒಕ್ಕುಂದ ಅವರು ‘ ಉದ್ಯೋಗಂ ಪುರುಷ ಲಕ್ಷಣಂ ಎಂಬ ಕಾಲ ಹೋಗಿ ಉದ್ಯೋಗಂ ಮನುಷ್ಯ ಲಕ್ಷಣಂ ಎಂಬ ಕಾಲ ಬಂದಿದೆ. ಸ್ತ್ರೀಯರಿಗೂ ಪುರುಷರಿಗೂ ಉದ್ಯೋಗಬೇಕು. ಜ್ಞಾನ ಮತ್ತು ಉದ್ಯೋಗ ಎರಡನ್ನೂ ಗಳಿಸಿದಾಗ ಮಾತ್ರ ವ್ಯಕ್ತಿತ್ವ ಪೂರ್ಣಗೊಳ್ಳುತ್ತದೆ ಎಂದರು.

ಪ್ರಾಧ್ಯಾಪಕರಾದ ನಿಶಾಥ್ ಷರೀಫ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗುಡ್‌ಫ್ಯೂಚರ್ ಅಕಾಡೆಮಿಯ ಮಹಾಂತೇಶ ಚೌಧರಿಯವರು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರಗಳಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಾಗೂ ತರಬೇತಿಯನ್ನು ನೀಡಿದರು. ಜ್ಯೋತಿ ಚವಲಗಿ ಪ್ರಾರ್ಥಿಸಿದರು. ಸೌಮ್ಯ ನೇತ್ರೇಕರ ಸ್ವಾಗತಿಸಿದರು. ಕಾವ್ಯಾ ಭಟ್ ವಂದಿಸಿದರು. ಶೋಭಾ ಹಾಗೂ ವೈಷ್ಣವಿ ನಿರೂಪಿಸಿದರು.