ಅಂಕೋಲಾ: ಕೆಲವು ತಿಂಗಳ ಹಿಂದೆ ಸರಣಿ ಕಳ್ಳತನದ ಮೂಲಕ ಕುಖ್ಯಾತಿಯಲ್ಲಿದ್ದ ಅಂಕೋಲಾ ಬಸ್ ನಿಲ್ದಾಣ ಮತ್ತೆ ಕಳ್ಳತನದ ಮೂಲಕ ಸುದ್ದಿಯಲ್ಲಿದೆ.
ಬಸ್ ಚಾಲಕರೊಬ್ಬರ ಬೈಕ್ ಕಳ್ಳತನವಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಬಾಳೆಗುಳಿ ಕೃಷ್ಣಾಪುರದ ನಿವಾಸಿ ಬಾಬು ಗೋಪಾಲ ಗೌಡ ಅವರ ಬೈಕ್ ಕಳ್ಳತನವಾಗಿದೆ.
ಕಾರವಾರ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಾಬು ಅವರು ಡಿಸೆಂಬರ್ 30ರಂದು ಬೆಳಿಗ್ಗೆ ಅಂಕೋಲಾದ ಮುಖ್ಯ ಬಸ್ ನಿಲ್ದಾಣದಲ್ಲಿ ತಮ್ಮ ಸ್ಪ್ಲೆಂಡರ್ ಪ್ಲಸ್ ಬೈಕ್ ಪಾರ್ಕ್ ಮಾಡಿ ಕರ್ತವ್ಯಕ್ಕೆ ತೆರಳಿದ್ದರು. ಮಧ್ಯಾಹ್ನ 3 ಗಂಟೆಯ ವೇಳೆ ಕರ್ತವ್ಯದಿಂದ ಮರಳಿ ಬಂದಾಗ ಬೈಕ್ ನಾಪತ್ತೆಯಾಗಿರುವುದನ್ನು ಕಂಡು ಆತಂಕಗೊಂಡು ವಿಚಾರಿಸಿದ್ದಾರೆ. ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಿಎಸ್ಐ ಸುಹಾಸ್ ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಾರಿಗೆ ಸಂಸ್ಥೆಯ ನಿರ್ಲಕ್ಷತನ
ಪಟ್ಟಣ ಪ್ರದೇಶದ ಹಲವು ಬಸ್ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣಗಳು ನಿರಂತರವಾಗಿ ಜರುಗುತ್ತಲೇ ಇವೆ. ಅಂಕೋಲಾದಲ್ಲಿಯೂ ಮುಖ್ಯ ಬಸ್ ನಿಲ್ದಾಣದ ಆವರಣದಲ್ಲಿಯೇ ಹಲವು ಬಾರಿ ಸರಣಿ ಕಳ್ಳತನವು ನಡೆದಿತ್ತು. ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯವರು ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಅಳವಡಿಸುವಂತೆ ಹಲವು ಬಾರಿ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡುವ ಇಲ್ಲಿನ ಅಧಿಕಾರಿಗಳು ಉನ್ನತ ಅಧಿಕಾರಿಗಳು ಮತ್ತು ಸಂಬಂಧಿಸಿದ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಸಿಸಿಟಿವಿ ಅಳವಡಿಕೆಗೆ ಪೂರ್ವ ಪರಿಶೀಲನೆ ಮತ್ತು ಅಂದಾಜು ವೆಚ್ಚದ ಮಾಹಿತಿಯನ್ನು ಪಡೆಯಲಾಗಿದೆ ಎಂದು ಹಾಡಿದ್ದೆ ರಾಗವನ್ನು ಮತ್ತೆ ಮತ್ತೆ ಹಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದ ನಿಲ್ದಾಣ ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಿದ್ದರ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನೌಕರರು ಇಲ್ಲವೇ ಸಾರ್ವಜನಿಕರು ಮಾನವ ಸಹಜ ಸಣ್ಣ ತಪ್ಪುಗಳನ್ನು ಮಾಡಿದ್ದರು ಅದನ್ನೇ ದೊಡ್ಡದೆಂದು ಬಿಂಬಿಸುವ ಇಲ್ಲಿನ ಘಟಕದ ಅಧಿಕಾರಿಗಳು ಮತ್ತು ವಿಭಾಗಿಯ ಅಧಿಕಾರಿಗಳು ಈ ರೀತಿಯ ಪ್ರಕರಣಗಳು ನಡೆದಾಗ ನಿರ್ಲಕ್ಷತನದ ಹೇಳಿಕೆ ನೀಡಿ ಕಾಲ ಹರಣ ಮಾಡುವುದು ಎಷ್ಟು ಸಮಂಜಸ? ಇಲ್ಲವೇ ಉದ್ದೇಶಪೂರ್ವಕವಾಗಿಯೇ ಸಾರಿಗೆ ಸಂಸ್ಥೆ ಕಳ್ಳತನಕ್ಕೆ ಪ್ರಚೋದನೆ ನೀಡುತ್ತಿದೆಯೇ? ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.