ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುವುದರ ಜೊತೆಗೆ ಪಾಲಕರ ಜೊತೆ ಶಾಲಾ ಆವರಣದಲ್ಲಿ ಪ್ರತಿಭಟನೆ ಕೈಗೊಂಡ ಘಟನೆ ಶುಕ್ರವಾರ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜು ವೆಳಿಪ್ ಅವರು ಕಳೆದ ಹಲವಾರು ತಿಂಗಳುಗಳಿಂದ ಶಾಲೆಗೆ ಖಾಯಂ ಶಿಕ್ಷಕರಿಲ್ಲ. 31 ಮಕ್ಕಳಿರುವ ಇಲ್ಲಿಗೆ ಒಬ್ಬರು ಕೂಡ ಖಾಯಂ ಶಿಕ್ಷಕರಿಲ್ಲ. ಕಳೆದ 3 ತಿಂಗಳ ಹಿಂದೆಯೇ ಶಿಕ್ಷಣ ಇಲಾಖೆಗೆ ಮನವಿ ನೀಡಲಾಗಿತ್ತು. ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರಿಗೆ, ತಹಶೀಲ್ದಾರರಿಗೆ ಮನವಿ ನೀಡಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಶಾಲೆಗೆ ಖಾಯಂ ಶಿಕ್ಷಕರ ನೇಮಕ ಆಗುವವರೆಗೆ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಖಾಯಂ ಶಿಕ್ಷಕರ ನೇಮಕ ಆಗುವವರೆಗೆ ಹೋರಾಟ ನಿಲ್ಲದು ಎಂದು ಎಚ್ಚರಿಕೆಯನ್ನು ನೀಡಿದರು.
ಶಾಲಾ ವಿದ್ಯಾರ್ಥಿಗಳು ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ನಮ್ಮ ಶಿಕ್ಷಣವನ್ನು ಉಳಿಸಿ, ಕಸಿದುಕೊಳ್ಳಬೇಡಿ ಎಂದು ವಿನಂತಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೋಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹಮದ್ ಶೇಖ್ ಅವರು ನಾವು ಸಧ್ಯ ಅತಿಥಿ ಶಿಕ್ಷಕರನ್ನು ಮಾತ್ರ ನೇಮಿಸಲು ಸಾಧ್ಯ. ಸರ್ಕಾರದ ಆದೇಶ ಬರುವ ತನಕ ಖಾಯಂ ಶಿಕ್ಷಕರನ್ನು ನೇಮಿಸಲು ಆಗುವುದಿಲ್ಲ ಎಂದು ಪಾಲಕರಿಗೆ ತಿಳಿಸಿದರು.
ಮೊದಲೇ ಹಿಂದುಳಿದ ತಾಲೂಕು ಜೋಯಿಡಾದಲ್ಲಿ ಶಿಕ್ಷಣ ಕಡಿಮೆ, ಹೀಗಿರುವಾಗ ಶಿಕ್ಷಣ ಇಲಾಖೆಯವರು ಅತಿಥಿ ಶಿಕ್ಷಕರನ್ನು ಬಿಟ್ಟು ಎರಡು ಅಥವಾ ಮೂರು ಶಿಕ್ಷಕರು ಇರುವಂತಹ ಶಾಲೆಯ ಶಿಕ್ಷಕರನ್ನು ಇಲ್ಲಿಗೆ ತಾತ್ಕಾಲಿಕವಾಗಿ ನೇಮಿಸಿ ಸಮಸ್ಯೆ ಬಗೆಹರಿಸಿ ಎಂದು ಪಾಲಕರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.