ನ್ಯೂ ಟೌನ್ ಶಿಪ್ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಸಂಭ್ರಮದಿಂದ ಜರುಗಿದ ವಾರ್ಷಿಕೋತ್ಸವ

ಜೊಯಿಡಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನ್ಯೂ ಟೌನ್ ಶಿಪ್ ಜೋಯಿಡಾ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ವಾರ್ಷಿಕೋತ್ಸವ ಸಮಾರಂಭ ಸಂಭ್ರಮ ಸಡಗರದಿಂದ ಜರುಗಿತು.

ಡಯಟ್ ಪ್ರಾಚಾರ್ಯರಾದ ಎಮ್.ಎಸ್.ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಾಲಾ ವಾರ್ಷಿಕೋತ್ಸವ ಸಮಾರಂಭಗಳು ಮಕ್ಕಳನ್ನು ಸಂಸ್ಕೃತರನ್ನಾಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳ ಇಂತಹ ಕಾರ್ಯಕ್ರಮಕ್ಕೆ ಪಾಲಕರು ಹಾಗೂ ಗ್ರಾಮಸ್ಥರು ಸಹಕಾರ ನೀಡುತ್ತಿರುವುದು ಗ್ರಾಮೀಣ ಜನರ ಶೈಕ್ಷಣಿಕ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆ ಕಷ್ಟದ ಕೆಲಸವಾಗಿದ್ದರೂ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಶಾಲಾಮಕ್ಕಳು ರಚಿಸಿದ ಮಳೆಬಿಲ್ಲು ಹಸ್ತಪ್ರತಿಯನ್ನು ಗ್ರಾಮಪಂಚಾಯತ್ ಸದಸ್ಯ ಮಹೇಂದ್ರ ಹರ್ಚಿರಕರ ಮತ್ತು ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ ಬಿಡುಗಡೆಗೊಳಿಸಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶಾಲಾ ಮುಖ್ಯೋಪಾಧ್ಯಿನಿ ವೆಂಕಮ್ಮ ಗಾಂವಕರ, ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಶ್ರಾವಣಿ ಮಹೇಂದ್ರ ಹರ್ಚಿರಕರ ಮತ್ತು ಆದರ್ಶ ವಿದ್ಯಾರ್ಥಿನಿ ತನಿಷ್ಕಾ ಶ್ಯಾಮ ಮಿರಾಶಿ ಇವರನ್ನು ಸನ್ಮಾನಿಸಲಾಯಿತು.‌

ವೇದಿಕೆಯಲ್ಲಿ ಸಿ ಆರ್ ಪಿ ಗಳಾದ ಜ್ಯೋತಿ ಗುಡೆ ಮತ್ತು ವಿಶಾಲಾಕ್ಷಿ ನಾಯ್ಕ, ಗ್ರಾ.ಪಂ ಸದಸ್ಯೆ ರೇಣುಕಾ ಚಿತ್ತೊಡಗಿ, ಗುಲಾಬಿ ಕೋಟೇಕರ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಿನಿ ವೆಂಕಮ್ಮ ಗಾಂವಕರ ಸ್ವಾಗತಿಸಿ, ವರದಿ ವಾಚಿಸಿದರು. ಸಹ ಶಿಕ್ಷಕರಾದ ನಾಗರಾಜ .ಎಸ್ ನಿರೂಪಿಸಿದರು. ಸಹ ಶಿಕ್ಷಕಿ ರಂಜನಿ ಭಟ್ಟ ವಂದಿಸಿದರು. ಸಹಶಿಕ್ಷಕಿ ಸಂಗಮ್ಮ ಮುಗಳಿ ಸಹಕರಿಸಿದರು.