ಜೋಯಿಡಾ ತಾಲೂಕಿನಲ್ಲಿ ಭತ್ತದ ಬೆಳೆಗಳಿಗೆ ಕೀಟ ರೋಗ ಬಾಧೆ

ಜೋಯಿಡಾ :- ತಾಲೂಕಿನಲ್ಲಿ ಮಳೆಯ ಕೊರೆತೆಯಿಂದಾಗಿ ಭತ್ತದ ಬೆಳೆಗಳಿಗೆ ಕೀಟ ಬಾಧೆ ಹಾಗೂ ಬೆಂಕಿ ರೋಗ ಕಾಣಿಸಿಕೊಳ್ಳುತ್ತಿದ್ದು,ಬೆಳೆಗಳು ಹಾಳಾಗುವ ಭೀತಿಯಿಂದ ತಾಲೂಕಿನ ರೈತ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ..

ಕಳೆದ ವಾರವಷ್ಟೇ ಸುರಿದ ಮಳೆಯಿಂದ ನಿರಂತರವಾಗಿ ಮಳೆ ಬೀಳುವ ಭರವಸೆಯಿತ್ತು. ಆದರೆ ಈ ಮಳೆಯಿಂದಾಗಿ ಬೆಳೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದ್ದು, 2 ದಿನಗಳಿಂದ ಮತ್ತೆ ತುಂತುರು ಮಳೆ ಸುರಿಯುತ್ತಿದೆ. ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗದೆ, ರೈತರಿಗೆ ಬೆಳೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಪ್ಲೋ…
ಈ ವರ್ಷ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಇದ್ರಿಂದ ಹಲವೆಡೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಮಳೆಯ ಕೊರತೆಯಿಂದಾಗಿ ಈ ರೋಗಬಾಧೆ ಕಾಣಿಸಿಕೊಂಡಿದೆ ಎಂದು ಕೃಷಿ ಇಲಾಖೆ‌ ಮಾಹಿತಿ‌ ನೀಡಿದೆ. ರೋಗಬಾಧೆಯಿಂದಾಗಿ ಬೆಳೆಗಳ ಬೆಳವಣಿಗೆ ಕೂಡ ಕುಂಠಿತವಾಗಿದ್ದು, ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ. ಇದು ಮುಖ್ಯವಾಗಿ ಭತ್ತದ ಬೆಳೆಯ ಮೇಲೆ ಹೆಚ್ಚಿನ‌ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇದರಿಂದ ಉತ್ಪಾದನೆ ಕುಸಿಯುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗುತ್ತಿದ್ದು, ಸಾಂಪ್ರದಾಯಿಕ ಬೀಜಗಳ ಮೇಲೆ ಮಿಶ್ರತಳಿಗಳ ಬಳಕೆ ಇತ್ತೀಚೆಗೆ ಹೆಚ್ಚಿದ್ದು, ಇದು ರೋಗ ಹರಡುವಿಕೆಗೆ ಕಾರಣವಾಗ್ತಿದೆ. ಕೀಟಗಳನ್ನು ತಡೆಯಲು ರೈತರು ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ಸಿಗದ ಕಾರಣ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ.

ಈ ವರ್ಷ ಮಳೆ ತಡವಾಗಿ ಆರಂಭವಾಗದ್ದು, ನಾಟಿ ಕಾರ್ಯವೂ ತಡವಾಗಿ ಮುಕ್ತಾಯಗೊಂಡಿದೆ. ಮತ್ತು ನಿಗದಿತ ಸಮಯದಲ್ಲಿ ಬೆಳೆಗಳಿಗೆ ಮಳೆ ನೀರಿನ ಅಭಾವ ಉಂಟಾಗಿ ಬೆಳೆಗಳ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಹೀಗಾಗಿ ಈ ವರ್ಷ ಕೊಯ್ಲು ತಡವಾಗಿ ಆರಂಭವಾಗುವ ಸಾಧ್ಯತೆಗಳಿವೆ.

ಸಂದೇಶ್‌ ಜೈನ್‌ ನುಡಿಸಿರಿ, ನ್ಯೂಸ್‌ ಜೋಯಿಡಾ