ಜೋಯಿಡಾ : ತಾಲ್ಲೂಕಿನ ಪಣಸೋಲಿ ವನ್ಯಜೀವಿ ವಲಯದ ಅವುರ್ಲಿಯಲ್ಲಿ ವನ್ಯಜೀವಿ ಇಲಾಖೆಯ ಆಶ್ರಯದಡಿ ಬೆಂಕಿಯಿಂದ ಕಾಡಿನ ರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಉಪ ವಲಯಾರಣ್ಯಾಧಿಕಾರಿ ರಾಜಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕಾಡು ಉಳಿದರೆ ನಾಡು, ಕಾಡು ಬೆಳೆದರೆ ನಾಡು ಸಮೃದ್ಧವಾಗಿರಲು ಸಾಧ್ಯ. ಬೇಸಿಗೆ ಕಾಲದಲ್ಲಿ ಅಗ್ನಿ ಅವಘಡ ಗಳಿಗೆ ಅರಣ್ಯ ಸಂಪತ್ತು ನಾಶವಾಗುವುದನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆಯನ್ನು ವಹಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಬೆಂಕಿಯಿಂದ ಅರಣ್ಯ ಹಾಗೂ ವನ್ಯ ಸಂಪತ್ತನ್ನು ರಕ್ಷಣೆ ಮಾಡುವ ವಿಧಾನದ ಬಗ್ಗೆ ಅರಿವನ್ನು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ವೇದಿಕೆಯಲ್ಲಿ ಗಸ್ತು ಅರಣ್ಯ ಪಾಲಕರಾದ ನಟರಾಜ್, ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಅಭಿವೃದ್ಧಿ ಸಮಿತಿಯಿಂದ ನೋಟು ಬುಕ್ ಮತ್ತು ಸ್ಕೂಲ್ ಬ್ಯಾಗ್ ವಿತರಿಸಲಾಯ್ತು.
ಕಾರ್ಯಕ್ರಮದಲ್ಲಿ ಪರಿಸರ ಅಭಿವೃದ್ಧಿ ಸಮಿತಿಯ ಸಧ್ಯಸರು, ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.