ವೋಟರ್ ಕಾರ್ಡ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ.!

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ 3503 ಮತದಾರರ ಗುರುತಿನ ಚೀಟಿಗಳಿಗೆ ಆಧಾರ್‌ಕಾರ್ಡ ಲಿಂಕ್‌ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ವರದಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಬಾಕಿ ಇರುವ ಆಧಾರ ಲಿಂಕ್‌ನ್ನು ಕೂಡಲೇ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಶನಿವಾರದಂದು ಪೋಟೋ ಎಲೆಕ್ಟ್ರೋಲ್ ರೂಲ್‌ಗಳ ವಿಶೇಷ ಸಾರಾಂಶ ಪರಿಷ್ಕರಣೆಯ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಯಿತು. ಈ ಸಂದರ್ಭದಲ್ಲಿ ಉತ್ತರಕನ್ನಡದ ಅಧಿಕಾರಿಗಳು ಪಾಲ್ಗೊಂಡು ಮಾಹಿತಿಯನ್ನು ನೀಡಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ ಕುಮಾರ ಮೀನಾ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ವೋಟರ್ ಕಾರ್ಡ್ಗಳಿಗೆ ಆಧಾರ ಲಿಂಕ್ ಮಾಡಿಸಬೇಕಿದ್ದು ಅದರ ಕುರಿತು ಅರಿವು ಮೂಡಿಸುವುದು ಎಲ್ಲಾ ಜಿಲ್ಲಾಧಿಕಾರಿಗಳ ಜವಾಬ್ದಾರಿ. ಮತದಾರರ ಗುರುತಿನ ಚೀಟಿಗಳಿಗೆೆ ಆದಾರ್‌ಕಾರ್ಡ ಜೋಡಣೆಯ ಕುರಿತು ಜಿಲ್ಲೆಯ ಎಲ್ಲಾ ಸಿ.ಇ.ಒ, ಡಿ.ಡಿ.ಪಿ.ಐ, ಡಿ.ಡಿ.ಪಿ.ಒ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಗರುಡ ಆ್ಯಪ್‌ನ್ನು ಡೌನಲೋಡ್ ಮಾಡಿಕೊಳ್ಳಬೇಕು ಹಾಗೂ ಈ ಕುರಿತು ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದರು. ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಧಾರ ಲಿಂಕ್‌ನ ವರದಿ ನೀಡಿದರು ಹಾಗೂ ಇನ್ನೂ ಬಾಕಿ ಉಳಿದಂತಹ ಆಧಾರ ಜೋಡಣೆಗಳನ್ನೂ ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.