‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಸಿದ್ಧಗೊಳ್ಳುತ್ತಿರುವ ರಾಷ್ಟ್ರಧ್ವಜಗಳು

ಕಾರವಾರ: ಸ್ವಾತಂತ್ರ‍್ಯದ ಅಮೃತ ಮಹೋತ್ಸವಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ಜಿಲ್ಲೆಯ ಪ್ರತಿ ಮನೆ, ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಹಾರಿಸುವ ನಿಟ್ಟಿನಲ್ಲಿ ಧ್ವಜವನ್ನು ತಯಾರಿಸಿ ಪೂರೈಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಜಿಲ್ಲೆಯಾದ್ಯಂತ ರಾಷ್ಟ್ರಧ್ವಜ ತಯಾರಿಸಿ ಒದಗಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಯು ಸಿದ್ಧತೆಯನ್ನು ಮಾಡಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ನಿರ್ದೇಶನದ ಮೇರೆಗೆ ಅಭಿಯಾನಕ್ಕೆ ಮೆರಗು ಸಿಕ್ಕಿದೆ. ದೇಶಕ್ಕೆ ಸ್ವಾತಂತ್ರ‍್ಯ ದೊರಕಿ 75 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ವಿಶೇಷವಾಗಿ ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಅಂಗವಾಗಿ ಪ್ರತಿ ಮನೆ ಮನೆ ಮೇಲೂ ರಾಷ್ಟ್ರಧ್ವಜವನ್ನು ಆಗಸ್ಟ್ 13 ರಿಂದ 15 ರ ವರೆಗೆ ಹಾರಿಸುವ ಮೂಲಕ ದೇಶಪ್ರೇಮ, ದೇಶಭಕ್ತಿಯನ್ನು ಮೆರೆಯುವ ಉದ್ದೇಶ ಹೊಂದಿದೆ.

ಉತ್ತರಕನ್ನಡ ಜಿಲ್ಲೆಯಾದ್ಯಂತ ಸಂಜೀವಿನಿ ಸ್ವ-ಸಹಾಯ ಮಹಿಳಾ ಒಕ್ಕೂಟದ ಸದಸ್ಯರು ತಯಾರಿಸಿರುವ ರಾಷ್ಟ್ರ ಧ್ವಜವನ್ನು ಎಲ್ಲಾ ತಾಲೂಕುಗಳ ಪ್ರತಿ ಗ್ರಾಮ ಪಂಚಾಯತಿಗಳಿಗೆ 260 ರಂತೆ ಜಿಲ್ಲೆಯ 229 ಪಂಚಾಯತಿಗಳಿಗೆ ಒಟ್ಟಾರೆ 60 ಸಾವಿರ ಧ್ವಜಗಳನ್ನು ತಯಾರಿಸಿ ಪೂರೈಸಲು ಯೋಜನೆಯನ್ನು ರೂಪಿಸಲಾಗಿದೆ.

ಜಿಲ್ಲೆಯಲ್ಲಿ ರಾಷ್ಟ್ರಧ್ವಜವನ್ನು ತಯಾರಿಸುವ ಕಾರ್ಯವನ್ನು ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಕಾತ್ಯಾಯನಿ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಮತ್ತು ಕುಮಟಾ ತಾಲೂಕಿನ ಕಾಗಲ ಗ್ರಾಮದ ಮಕರಂದ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳ ಮೂಲಕ ತಯಾರಿಸಲಾಗುತ್ತಿದೆ. ಪ್ರತಿ ಒಕ್ಕೂಟಗಳಲ್ಲಿ 85 ರಿಂದ 90 ಮಹಿಳಾ ಸದಸ್ಯರು ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಹಾಗೂ ಜಿಲ್ಲೆಯ ಇತರೆ ತಾಲೂಕುಗಳಿಗೆ ರಾಷ್ಟ್ರಧ್ವಜ ಪೂರೈಕೆದಾರರಾಗಿ ಆಯಾ ತಾಲೂಕಿನ ಒಂದು ಗ್ರಾಮ ಪಂಚಾಯತ ಮಟ್ಟದ ಒಕ್ಕೂಟವನ್ನು ನೋಡಲ್ ಆಗಿ ಆಯ್ಕೆ ಮಾಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಧ್ವಜಗಳನ್ನು ಪೂರೈಸುವ ಜವಾಬ್ದಾರಿಯನ್ನು ನೀಡಲಾಗಿದೆ. ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ತಯಾರಿಸುವ ಮೂಲಕ ದೇಶ ಸೇವೆ ಮಾಡಲು ಮತ್ತು ತನ್ಮೂಲಕ ದೇಶಪ್ರೇಮ ಮೆರೆಯಲು ತಮಗೊಂದು ಸದಾವಕಾಶ ಸಿಕ್ಕಿದೆ ಎಂದು ಒಕ್ಕೂಟದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಕಲ ಸಿದ್ಧತೆ ಮಾಡಿಕೊಂಡಿದೆ. 2022 ರ 75 ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಪ್ರತಿ ಮನೆ ಮನೆಗಳ ಮೇಲೂ ಹಾರಿಸುತ್ತಿರುವುದು ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ರಾಷ್ಟ್ರೀಯ ಭಾವೈಕ್ಯತೆ ಹಾಗೂ ರಾಷ್ಟçಪ್ರೇಮವನ್ನು ಮೆರೆಯಬಹುದಾಗಿದೆ.

-ಪ್ರಿಯಾಂಗಾ ಎಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ್, ಉತ್ತರ ಕನ್ನಡ