ಅಂಕೋಲಾ: ಏಡ್ಸ ಎಂಬ ಮಹಾಮಾರಿ ಸದ್ದಿಲ್ಲದೆ ಮಸಣಕ್ಕೆ ಕಳುಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಏಡ್ಸ ಕಾಯಿಲೆ ಪೀಡಿತರಿಗೆ ಔಷದ, ಆಪ್ತ ಸಮಾಲೋಚನೆ ಮತ್ತು ಇತರ ಸಹಾಯ ಸೌಲಭ್ಯಗಳು ಸರಕಾರದಿಂದ ಲಭ್ಯವಿರುತ್ತವೆ ಎಂದು ಅಂಕೋಲಾ ತಾಲೂಕಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ರಾಜೇಶ್ವರಿ ಕಿರ್ಲೊಸ್ಕರ್ ಅಭಿಪ್ರಾಯ ಪಟ್ಟರು.
ಬುಧವಾರ ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಂದಿಗೆ ಸಮೂದಾಯ ಆರೋಗ್ಯ ಅಧಿಕಾರಿ ಪೂಜಾ ನಾಯ್ಕ ಮಾತನಾಡಿ ಯುವ ಪೀಳಿಗೆ ಭಾವನಾತ್ಮಕ ಒತ್ತಡ ಹಾಗೂ ವಯೋಸಹಜ ದೌರ್ಬಲ್ಯಗಳಿಂದ ಜವಾಬ್ದಾರಿಯನ್ನು ಮರೆತು ವರ್ತಿಸಿದಾಗ ಸಮಸ್ಯೆಗಳು ಉಂಟಾಗುತ್ತವೆ. ಶಿಸ್ತು, ನೈರ್ಮಲ್ಯತೆ ಮತ್ತು ಏಡ್ಸ ಕಾಯಿಲೆ ಕುರಿತ ತಿಳುವಳಿಕೆ ಹೊಂದುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಹಿರಿಯ ಎ.ಎನ್.ಎಂ. ಲೀಲಾವತಿ ನಾಯ್ಕ ಮಾತನಾಡಿ ರಕ್ತದಾನಿಗಳಿಂದ ರಕ್ತ ಸ್ವೀಕರಿಸುವಾಗ ಎಚ್ಚರ ವಹಿಸಬೇಕು. ಅಪರಿಚಿತರೊಂದಿಗೆ ಅನುಚಿತ ಸಂಭಂದ, ಲೈಂಗಿಕ ದುರ್ವತನೆಗಳು, ಮಾದಕ ವಸ್ತುಗಳ ವ್ಯಸನ ಮುಂತಾದ ಪಿಡುಗುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಅಶ್ವೀನ ಆರ್. ಸ್ವಾಗತಿಸಿದರು. ಪ್ರಾಚಾರ್ಯ ಡಾ. ಎಸ್. ವಿ. ವಸ್ತ್ರದ್ ಅಧ್ಯಕ್ಷತೆ ವಹಿಸಿದ್ದರು. ಸಂಜನಾ ನಾಯ್ಕ ನಿರೂಪಿಸಿದರೆ, ಸುಮಂತ ನಾಯ್ಕ ವಂದಿಸಿದರು .ಇದೇ ಸಂದರ್ಭದಲ್ಲಿ ಏಡ್ಸ ಕುರಿತಾದ ಭಿತ್ತಿ ಪತ್ರ ಸ್ಫರ್ಧೆ ಮತ್ತು ಜಾಗೃತಿ ಅಭಿಯಾನ ನಡೆಸಲಾಯಿತು.