ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ

ಬೆಂಗಳೂರು, ಡಿ.22: ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಪೊಲೀಸ್​ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಹಾಗೂ ಕೊರೊನಾ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಹಲವಾರು ಅಧಿಕಾರಿಗಳ ಜೊತೆ ಗೃಹ ಸಚಿವ ಡಾ.ಪರಮೇಶ್ವರ್ ಅವರು ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ MG ರೋಡ್, ಕಮರ್ಷಿಯಲ್ ಸ್ಟೀಟ್​ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಅಹಿತಕರ ಘಟನೆಗಳು ಸಹ ನಡೆದಿದೆ. ಪೊಲೀಸ್ ಇಲಾಖೆ, ಮತ್ತು ಅಬಕಾರಿ ಇಲಾಖೆ, ಮೆಟ್ರೋ, ಕೆಎಸ್​ಆರ್​ಟಿಸಿ ಎಲ್ಲರನ್ನೂ ಕರೆದು ಸಭೆ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು. ಅದರ ಜೊತೆಗೂ ಕೋವಿಡ್ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಬಗ್ಗೆ ಸಭೆ ಕರೆದಿದ್ದೆವು. ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲು ಎಜೆನ್ಸಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಅವರವರ ಇಲಾಖೆಯಲ್ಲಿ ಏನೆಲ್ಲ ಮಾಡಬೇಕು ಅನ್ನೋದು ಸೂಚನೆ ಕೊಡಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಬೇರೆ ಬೇರೆ ದೃಷ್ಟಿ ಇಟ್ಟುಕೊಂಡು ಹೊರಗಿನ ಜನ‌ ತೊಂದರೆ ಮಾಡಬಹುದು, ಅದನ್ನ ಸಹ ನಾವು ಗಮನಿಸುತ್ತೇವೆ. ಇಂಟಲಿಜೆನ್ಸ್ ವಿಂಗ್ ಅದನ್ನ ವಾಚ್ ಮಾಡಲಿದೆ ಎಂದರು. ಇನ್ನು ಇದೇ ವೇಳೆ ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಸಚಿವ ಪರಮೇಶ್ವರ್, ಸಧ್ಯಕ್ಕೆ ಯಾವುದೇ ಬದಲಾವಣೆ ಮಾಡಲು ಹೋಗೋದಿಲ್ಲ. ಹೆಚ್ಚು ಜನ ಇದ್ದಾಗ ಮಾಸ್ಕ್ ಹಾಕಬೇಕು ಎಂದು ಆರೋಗ್ಯ ಇಲಾಖೆಯಿಂದ ಸೂಚನೆ ಬಂದಿದೆ. ಅದನ್ನ ಬಿಟ್ಟರೆ ಬೇರೆ ಯಾವುದೇ ನಿರ್ಬಂಧ ಇಲ್ಲ.

ಮೆಟ್ರೋಗೆ MG ರೋಡ್ ಎಂಟ್ರಿಯಾಗುವ ಬದಲು ಕುಂಬ್ಳೆ ಸರ್ಕಲ್ ಅಥವಾ ಟ್ರಿನಿಟಿ ಸರ್ಕಲ್ ಗೆ ಹೋಗಬಹುದು. ಸಣ್ಣ ಪುಟ್ಟ ಅಡ್ಜೆಸ್ಟ್ ಮೆಂಟ್ ಬಿಟ್ಟರೆ ಬೇರೆ ಏನು ಇಲ್ಲ. ಯಾರು ಅನಾವಶ್ಯಕವಾಗಿ ಟೆಂಟ್ ಗಳನ್ನ ಹಾಕಿಕೊಂಡು ಲಿಕ್ಕರ್ ಸರ್ವ್ ಮಾಡೋದು ಅಂಥದ್ದು ಕಂಡು ಬಂದ್ರೆ ರೆಗ್ಯೂಲೇಟ್ ಮಾಡ್ತೀವಿ. MG ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದು‌ ಸ್ಪಷ್ಟಪಡಿಸಿದರು.