ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದವರು, ಮಾರಾಟಗಾರರ ವಿರುದ್ಧ ಒಟ್ಟು 324 ಜನರ ವಿರುದ್ಧ ದೂರು ದಾಖಲು

ಬೆಂಗಳೂರು, (ನವೆಂಬರ್ 17): ಅತ್ತಿಬೆಲೆಯಲ್ಲಿ ಪಟಾಕಿ ದುರಂತ ಬೆನಲ್ಲೇ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಈ ಬಾರಿ ದೀಪಾವಳಿಗೆ ಪಟಾಕಿ ಮಾರಾಟ ಹಾಗೂ ಸಿಡಿಸುವುದಕ್ಕೆ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಆದರೂ ಸಹ ಬೆಂಗಳೂರಿನ ಹಲವೆಡೆ ಬಿಬಿಎಂಪಿ ಮತ್ತು ಸರ್ಕಾರದ ನಿಯಮಗಳನ್ನು ಗಾಳಿ ತೂರಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡಲಾಗಿದೆ. ಅಲ್ಲದೇ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದ್ದು, ಅವರ ವಿರುದ್ಧ ಇದೀಗ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದ 305 ಮಂದಿ ವಿರುದ್ಧ ದೂರು ದಾಖಲಾಗಿದ್ದರೆ, ಅಕ್ರಮ ಪಟಾಕಿ ಮಾರಾಟಗ ಮಾಡಿದವರ ವಿರುದ್ಧ 19 ಕೇಸ್ ದಾಖಲಾಗಿವೆ.

ಅಲ್ಲದೇ ನಗರದಲ್ಲಿ ದೀಪಾವಳಿ ಸಂದರ್ಭದಲ್ಲಿ ಯಾವೆಲ್ಲ ಕ್ರಮ ವಹಿಸಬೇಕು ಎಂದು ಸರ್ಕಾರ ಮೊದಲೆ ಎಚ್ಚರಿಕೆ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ದೀಪಾವಳಿ ಸಂದರ್ಭದಲ್ಲಿ ಪಟಾಕಿಯನ್ನು ರಾತ್ರಿ 8 ರಿಂದ 10 ಗಂಟೆ ಒಳಗೆ ಸಿಡಿಸುವಂತೆ ಸೂಚನೆ ನೀಡಲಾಗಿತ್ತು. ಆದ್ರೆ, ಬೆಂಗಳೂರು ನಗರದಲ್ಲಿ ಸಮಯ ಮೀರಿ ಪಟಾಕಿ ಸಿಡಿಸಿದ 305 ಮಂದಿ ವಿರುದ್ಧ ದೂರು ದಾಖಲಾಗಿದೆ. ಹೆಗಡೆನಗರ, ಸಂಪಿಗೆಹಳ್ಳಿ, ಕೊರಮಂಗಲ, ಬೇಗೂರು, ಕೊತ್ತನೂರು, ಅಮೃತಹಳ್ಳಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ.

ದೀಪಾವಳಿಗೂ ಮುನ್ನವೇ ಬೆಂಗಳೂರಿನ ಅತ್ತಿಬೆಲೆಯಲ್ಲಿ ದೊಡ್ಡ ಪಟಾಕಿ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ 16 ಜನರು ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ಪಟಾಕಿ ಮಾರಾಟ ನಿಷೇಧಿಸಿ ಹಸಿರು ಪಟಾಕಿ ಬಳಕೆಗೆ ಸೂಚಿಸಿತ್ತು. ಇದರಿಂದ ಪಟಾಕಿ ಮಾರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಹೈಕೋರ್ಟ್ ಕೆಲ ನಿಯಮಗಳನ್ನು ಹಾಕಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿತ್ತು.