ಬೆಂಗಳೂರು, ನ.17: ಎಲ್ಲೆಂದರಲ್ಲಿ ಆಧಾರ್, ಪಾನ್ ಕಾರ್ಡ್ ಕೊಡುವ ಜನರೇ ಎಚ್ಚರವಾಗಿರಿ. ಇಲ್ಲವಾದರೆ, ನಿಮ್ಮ ದಾಖಲೆಗಳಲ್ಲಿ ಬೇನಾಮಿ (ನಕಲಿ) ಬ್ಯಾಂಕ್ ಖಾತೆಗಳು ಸೃಷ್ಟಿಯಾಗುತ್ತದೆ. ಬೆಂಗಳೂರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಆರೋಪಿಗಳಾದ ಸಮೀರ್, ಮಹಮ್ಮದ್ ಹಸನ್, ಅಮೂಲ್ ಬಾಬು, ಮಹಮ್ಮದ್ ಇರ್ಫಾನ್, ತಂಝೀಲ್, ಮಂಜುನಾಥ ಬಂಧಿತರು. ಜನರ ಕೆವೈಸಿ ಪಡೆದು ಬಳಿಕ ಬ್ಯಾಂಕ್ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು.
5 ಸಾವಿರದಿಂದ 10,000 ರೂ. ಕೊಟ್ಟು ಕೆವೈಸಿ ಪಡೆಯುತ್ತಿದ್ದ ಆರೋಪಿಗಳು, ಆಧಾರ್, ಪಾನ್ ಕಾರ್ಡ್, ಒಂದು ಸಹಿಗೆ 10,000 ರೂ. ರೇಟ್ ಫಿಕ್ಸ್ ಮಾಡಿದ್ದರು. ಪ್ರತಿ ದಾಖಲಾತಿಗೆ ಹೊಸ ಸಿಮ್ ಬಳಸಿ ಖಾತೆ ತೆರೆಯುತ್ತಿದ್ದರು. ವಿದೇಶದಲ್ಲಿ ಕುಳಿತುಕೊಂಡೇ ಬೆಂಗಳೂರಿನಲ್ಲಿ ಬೇನಾಮಿ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು.
ಈ ವಿಚಾರ ತಿಳಿದ ಸಿಸಿಬಿ ಪೊಲೀಸರು, ಬೃಹತ್ ಬೇನಾಮಿ ಖಾತೆ ಜಾಲ ಪತ್ತೆಹಚ್ಚಿ, ಬಂಧಿತ ಆರೋಪಿಗಳಿಂದ 150 ಕ್ಕೂ ಹೆಚ್ಚು ಬೇನಾಮಿ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಲಾಗಿದೆ.
ದುಬೈನಲ್ಲಿದ್ದಾನೆ ಪ್ರಕರಣದ ಕಿಂಗ್ಪಿನ್
ದುಬೈನಲ್ಲಿ ಕುಳಿತುಗೊಂಡಿರುವ ಕಿಂಗ್ಪಿನ್, ಬಂಧಿತ ಆರೋಪಿಗಳಿಗೆ ಸೂಚನೆ ಕೊಡುತ್ತಿದ್ದನು. ಈತನ ಸೂಚನೆ ಮೇರೆಗೆ ಆರೋಪಿಗಳು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ದುಬೈನಲ್ಲಿರುವ ವ್ಯಕ್ತಿಗೆ ಮಾಹಿತಿ ರವಾನಿಸುತ್ತಿದ್ದರು.
ಈ ಕೃತ್ಯ ಎಸಗಲೆಂದೇ ಆರೋಪಿಗಳು ಮತ್ತಿಕೆರೆಯಲ್ಲಿ ಮನೆ ಕಂ ಕಚೇರಿ ಮಾಡಿಕೊಂಡಿದ್ದರು. ಇತ್ತೀಚೆಗೆ ಮಂಜೇಶ್ ಎಂಬಾತ ತನ್ನ ಸ್ನೇಹಿತನ ಜೊತೆ ಈ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಮಂಜೇಶ್ ಸ್ನೇಹಿತ ಆಧಾರ್, ಪಾನ್ ಕಾರ್ಡ್ ನೀಡಿದ್ದಲ್ಲದೆ, 10,000 ರೂ. ಕೊಡುತ್ತಾರೆ ನಿನ್ನ ದಾಖಲೆ ಕೊಡುವಂತೆ ಮಂಜೇಶ್ಗೆ ಹೇಳಿದ್ದ. ದಾಖಲೆಗಳ ರಾಶಿ, ಬ್ಯಾಂಕ್ ಪುಸ್ತಕ ನೋಡಿ ಮಂಜೇಶ್ಗೆ ಅನುಮಾನ ಹುಟ್ಟುಕೊಂಡಿದೆ.
ಕೂಡಲೇ ಮಂಜೇಶ್ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.