ಬೆಂಗಳೂರು: ನಗರದ ಫ್ಲೈಓವರ್ನಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಸ್ತೆ ಮೇಲೆ ಬಿದ್ದಿರುವ ಜಲ್ಲಿ ಕಲ್ಲುಗಳನ್ನು ಸಣಿಕೆಯಿಂದ ತೆರವು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವರು ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು BBMP ಯನ್ನು ಟೀಕಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ಸಂಚಾರ ಠಾಣೆ ಪೊಲೀಸರು ಸೋಮವಾರ ಸಂಜೆ ಈ ವಿಡಿಯೋ ಹಂಚಿಕೊಂಡಿದ್ದಾರೆ. “ಬಿಡಿಎ ಅಪ್ ರ‍್ಯಾಂಪ್‌ನಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಜಲ್ಲಿಕಲ್ಲುಗಳನ್ನು ನಿಲ್ದಾಣದ ಸಿಬ್ಬಂದಿ ತೆರವುಗೊಳಿಸಿದ್ದಾರೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸಿಬ್ಬಂದಿ ಕಾರ್ಯ ಮೆಚ್ಚಿದ ಪಶ್ಚಿಮ ಸಂಚಾರ ಡಿಸಿಪಿ ಡಾ ಸುಮನ್ ಡಿ ಪನ್ನೇಕರ್, ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಜಲ್ಲಿಕಲ್ಲುಗಳನ್ನು ನಮ್ಮ ಸಿಬ್ಬಂದಿ ತೆರವುಗೊಳಿಸಿದ್ದಾರೆ ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸಿಬ್ಬಂದಿ ಜೊತೆ ಇಬ್ಬರು ಕೆಲಸಗಾರರು ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಉತ್ತಮ ಕಲಸ ಎಂದು ನೆಟ್ಟಿಗರೊಬ್ಬರು ಹೇಳಿದರೆ, ಇನ್ನೊಬ್ಬರು, ನಮ್ಮ ಪ್ರೀತಿಯ ಟ್ರಾಫಿಕ್ ಪೊಲೀಸರಿಗೆ ಬಿಗ್ ಸೆಲ್ಯೂಟ್ ಎಂದಿದ್ದಾರೆ. ಜಲ್ಲಿ ಕಲ್ಲುಗಳು ರಸ್ತೆ ಮೇಲೆ ಚೆಲ್ಲಿಕೊಂಡ ಹೋದ ವಾಹನ ಚಾಲಕರಿಗೆ ದಂಡ ವಿಧಿಸಿ ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.
ಸರ್ವೇಶ್ ರಾನಡೆ ಎಂಬವರು ಟ್ವೀಟ್ ಮಾಡಿ, ಆ ಕೆಲಸ ಅವರದ್ದಲ್ಲವಾದರೂ ಪೊಲೀಸರದ್ದು ಒಳ್ಳೆಯ ಕೆಲಸ ಎಂದು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಮಾಡಬೇಕಾದ ಜನರು ಎಲ್ಲಿದ್ದಾರೆ? ಆ ವ್ಯಕ್ತಿಗಳು ಮತ್ತು ಅವರ ಮೇಲಧಿಕಾರಿಗಳು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಬಿಬಿಎಂಪಿಯನ್ನು ಪ್ರಶ್ನಿಸಿ ಟೀಕಿಸಿದ್ದಾರೆ.