ಉತ್ತರಪ್ರದೇಶ: ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ದಿನವೂ ಒಂದೊಂದು ಸಮಸ್ಯೆ. ಫಸಲು ಉತ್ತಮವಾಗಿ ಬಂದಾಗ ಬೆಲೆ ಇರುವುದಿಲ್ಲ, ಬೆಲೆ ಇದ್ದಾಗ ಫಸಲು ಬರುವುದಿಲ್ಲ, ಇದರ ಜೊತೆಗೆ ಕಾಡುವ ಅತೀವೃಷ್ಠಿ ಅನಾವೃಷ್ಠಿಗಳು ರೈತನ ಬದುಕನ್ನು ಹೈರಾಣಾಗಿಸಿವೆ. ಇದರ ಜೊತೆ ಕಾಡು ಪ್ರಾಣಿಗಳ ಕಾಟ ರೈತನ ನಿದ್ದೆಕೆಡಿಸಿವೆ. ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆಗೆ ರೈತರು ಹಿಂದಿನಿಂದಲೂ ಒಂದಲ್ಲ ಒಂದು ತಂತ್ರವನ್ನು ಮಾಡುತ್ತಲೇ ಬಂದಿದ್ದಾರೆ. ಬೆದರು ಬೊಂಬೆಗಳನ್ನು ಹೊದಲ ಮಧ್ಯೆ ಇರಿಸುವುದು ಧ್ವನಿವರ್ಧಕಗಳಿಂದ ಸದ್ದು ಮಾಡುವುದು ಸೇರಿದಂತೆ ಹಲವು ತಂತ್ರಗಳನ್ನು ರೈತ ಪ್ರಯೋಗ ಮಾಡಿದ್ದರೂ ಅದು ಸ್ವಲ್ಪ ಕಾಲ ಮಾತ್ರ. ನಂತರ ಪ್ರಾಣಿ ಪಕ್ಷಿಗಳಿಗೂ ಇದು ಫೇಕು ಎಂಬುದು ತಿಳಿದು ಹೋಗಿ ಮತ್ತೆ ಬೆಳೆಗಳನ್ನು ತಿನ್ನಲು ಬರುತ್ತವೆ. ಇದರಿಂದ ಬೆಳೆ ಬೆಳೆದ ರೈತ ಸದಾ ಸಂಕಷ್ಟದಲ್ಲೇ ದಿನ ಕಳೆಯುತ್ತಾನೆ.
ಅದೇ ರೀತಿ ಇಲ್ಲೊಂದು ಕಡೆ ರೈತರೊಬ್ಬರು ಪ್ರಾಣಿಗಳಿಂದ ಬೆಳೆ ಕಾಪಾಡುವ ಸಲುವಾಗಿ ಕರಡಿ ವೇಷ ತೊಟ್ಟು ಹೊಲಗಳಲ್ಲಿ ಓಡಾಡುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ರೈತನ ಈ ಹೊಸ ಪ್ರಯೋಗ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತರು, ತಮ್ಮ ಬೆಳೆಗಳನ್ನು ಮಂಗಗಳಿಂದ ರಕ್ಷಿಸಿಕೊಳ್ಳಲು ಕರಡಿ ವೇಷದ ಮೊರೆ ಹೋಗಿದ್ದಾರೆ. ಹೊಲದ ಮಧ್ಯೆ ನಿಲ್ಲಿಸಿದ್ದ ಬೆದರುಗೊಂಬೆಗಳು ಯಾವುದೇ ಪ್ರಯೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆ ರಕ್ಷಣೆಗೆ ಈ ಹೊಸ ಪ್ರಯೋಗ ನಡೆಸುತ್ತಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಗಜೇಂದ್ರ ಸಿಂಗ್ ಮಾತನಾಡಿ, 40 ರಿಂದ 45 ಮಂಗಗಳು ಒಟ್ಟೊಟ್ಟಿಗೆ ಹೊಲಕ್ಕೆ ದಾಂಗುಡಿ ಇಟ್ಟು ಬೆಳೆ ಹಾಳು ಮಾಡುತ್ತವೆ. ಈ ಮಂಗಗಳನ್ನು ದೂರ ಅಟ್ಟುವಂತೆ ನಾವು ಆಡಳಿತಕ್ಕೆ ಮನವಿ ಮಾಡಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ, ಹೀಗಾಗಿ ನಾವೇ 4000 ರೂಪಾಯಿ ಹಣ ಖರ್ಚು ಮಾಡಿ ಕರಡಿ ವೇಷದ ಈ ಕಾಸ್ಟ್ಯೂಮ್ ಅನ್ನು ಖರೀದಿಸಿ ಬೆಳೆ ರಕ್ಷಣೆಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲಖೀಂಪುರ ಖೇರಿಯ ವಿಭಾಗೀಯ ಅರಣ್ಯ ಅಧಿಕಾರಿ (DFO)ಸಂಜಯ್ ಬಿಸ್ವಾಲ್ ಅವರನ್ನು ಸಂಪರ್ಕಿಸಿದಾಗ ಅವರು, ಬೆಳೆಗಳ ರಕ್ಷಣೆಗೆ ಅಗತ್ಯವಾದ ಎಲ್ಲಾ ಕ್ರಮ ಕೈಗೊಳ್ಳಲಾಗುವುದು, ಕೋತಿಗಳನ್ನು ದೂರ ಅಟ್ಟಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ರೈತರು ಈ ಕರಡಿ ವೇಷ ಧರಿಸಿ ಹೊಲದಲ್ಲಿ ತಿರುಗಾಡುತ್ತಿರುವ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯಕ್ಕೆ ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಚಿರತೆ ವೇಷ ತೊಡುವಂತೆ ರೈತರಿಗೆ ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಇದು ರಾಷ್ಟ್ರೀಯ ಉದ್ಯಾನಕ್ಕೆ ಸಮೀಪದ ಪ್ರದೇಶವಾಗಿದ್ದು ಇಲ್ಲಿ ಕಾಡುಪ್ರಾಣಿಗಳ ಹಾವಳಿ ಸಾಮಾನ್ಯ ಎನಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.