ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ ಎನ್​ಐಎ ದಾಳಿ

ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು   ಹತ್ಯೆ ಪ್ರಕರಣ ಸಂಬಂಧ  ದಕ್ಷಿಣ ಕನ್ನಡ  ಮತ್ತು ಕೊಡಗು ಜಿಲ್ಲೆಯಲ್ಲಿರುವ ನಿಷೇಧಿತ ಪಿಎಫ್​ಐ  ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಎನ್​ಐಎ  ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ಏಕಕಾಲಕ್ಕೆ 6 ಕಡೆಗಳಲ್ಲಿ ದಾಳಿ ನಡೆಸಿರುವ ಎನ್​ಐಎ ಅಧಿಕಾರಿಗಳು, ಎಲೆಕ್ಟ್ರಾನಿಕ್ ಡಿವೈಸ್​​ಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಎನ್​ಐಎ ಅಧಿಕಾರಿಗಳ ದಾಳಿ ಕುರಿತು ಟಿವಿ9 ಜೊತೆ ಮಾತನಾಡಿದ ಕೊಡಗು ಎಸ್​ಪಿ ರಾಮರಾಜನ್, ನಿಷೇಧಿತ ಸಂಘಟನೆ ಪಿಎಫ್​ಐನಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರನ್ನು ವಿಚಾರಣೆ ನಡೆಸಲಾಗುತ್ತಿದೆ. ಸೋಮವಾರಪೇಟೆಯಲ್ಲಿ ಹಲವು ಕಾರ್ಯಕರ್ತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ‌ 26 ರಂದು ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯು ಇಡೀ ರಾಜ್ಯವೇ ದಂಗಾಗುವಂತೆ ಹಾಗೂ ಕರ್ನಾಟಕದ ಬಿಜೆಪಿ ಸರ್ಕಾರದ ಬುಡ ಅಲುಗಾಡಿಸಿತ್ತು. ಅಷ್ಟೇ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ತಾಲೂಕು ಶಾಸಕರೂ ಆಗಿರುವ ಸಚಿವ ಎಸ್. ಅಂಗಾರ ವಿರುದ್ಧ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದರು. ರಾಜ್ಯಾದ್ಯಂತ ಕಾರ್ಯಕರ್ತರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, ಸರ್ಕಾರದ ಕಠಿಣ ಕ್ರಮದ ಹೇಳಿಕೆಯನ್ನು ಟೀಕಿಸಿದರು, ಯುವ ಮೂರ್ಚಾದ ಮುಖಂಡರು ರಾಜೀನಾಮೆಯ ಬಿಸಿ ತಟ್ಟಿಸಿದ್ದರು.

ಪ್ರಕರಣ ಸಂಬಂಧ ತನಿಖೆಯಲ್ಲಿ ರಾಜ್ಯ ಸರ್ಕಾರ ಎನ್​ಐಎಗೆ ವಹಿಸಿತ್ತು. ಬಳಿಕ ರಾಜ್ಯದ ಹಲವೆಡೆ ದಾಳಿಗಳನ್ನು ನಡೆಸಿದ್ದ ಎನ್​ಐಎ ಅಧಿಕಾರಿಗಳು, ಈ ಸಂಘಟನೆಯ ರಾಜಕೀಯ ಪಕ್ಷ ಎಸ್​ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ ಮನೆ ಮೇಲೂ ದಾಳಿ ನಡೆಸಿ ಶೋಧ ನಡೆಸಿದ್ದರು. ಅಲ್ಲದೆ, ಈಗಾಗಲೇ ಎನ್​ಐಎ ಅಧಿಕಾರಿಗಳು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ.