ಮಲ್ಪೆ ಬಳಿ ಮುಳುಗುತ್ತಿರುವ ಮೀನುಗಾರಿಕಾ ಬೋಟ್​​ನಿಂದ 8 ಮೀನುಗಾರರ ರಕ್ಷಣೆ

ಉಡುಪಿ, ಡಿಸೆಂಬರ್ 22: ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ   ಶುಕ್ರವಾರ ಮೀನುಗಾರಿಕಾ ಬೋಟೊಂದು  ಮುಳುಗಡೆಯಾಗಿದೆ. ಬೋಟ್​​​ನಿಂದ 8 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಉಡುಪಿ ತಾಲೂಕಿ‌ನ ಕಡೆಕಾರಿನ ರಕ್ಷಾ ಅವರಿಗೆ ಸೇರಿದ ಮೀನುಗಾರಿಕಾ ಬೋಟ್ ಅರಬ್ಬೀ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಮುಳುಗಡೆಯಾಗಿದೆ.

ಬೋಟ್ ತಳ ಭಾಗಕ್ಕೆ ವಸ್ತುವೊಂದು ತಗುಲಿ, ನೀರು ಒಳನುಗ್ಗಿದೆ. ಪರಿಣಮವಾಗಿ ಬೋಟ್ ಮುಳುಗಲು ಆರಂಭವಾಗಿದೆ. ವಯರ್ ಲೆಸ್ ಮೂಲಕ ರಕ್ಷಣೆ ಕರೆ ಬಂದ ಕಾರಣ, ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್​​ನವರು ತಕ್ಷಣ ಸ್ಥಳಕ್ಕೆ ಧಾವಿಸಿ ಮೀನುಗಾರರ ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಿಂದ ಸುಮಾರು 18 ಲಕ್ಷ ರೂಪಾಯಿ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಉಡುಪಿ ಜಿಲ್ಲೆಯ ಶಿರೂರು ಬಳಿ ಹವಾಮಾನ ವೈಪರೀತ್ಯದ ಪರಿಣಾಮ ದೋಣಿ ಮುಳುಗಿ ಇಬ್ಬರು ಮೀನುಗಾರರು ಸಮುದ್ರಪಾಲಾದ ಘಟನೆ ಡಿಸೆಂಬರ್ 18 ರಂದು ಸಂಭವಿಸಿತ್ತು. ಭಾನುವಾರ ರಾತ್ರಿ ಶಿರೂರಿನ ಕಳಿಹಿತ್ಲು ಕಡೆಯಿಂದ ಮೂವರು ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ದುರಂತ ಸಂಭವಿಸಿತ್ತು. ಹತ್ತಿರದಲ್ಲಿದ್ದ ದೋಣಿಯವರು ಒಬ್ಬ ವ್ಯಕ್ತಿಯನ್ನು ರಕ್ಷಿಸಿದರು. ಘಟನೆ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.