ಅಂಕೋಲಾ: ದೇವರ ಕೃಪೆ ಅರಿಯುವ ಉದ್ದೇಶದಿಂದ ಯುರೋಪ್ ಖಂಡದ ಮಹಿಳೆ ಓರ್ವರು ಜಗತ್ತಿನಾದ್ಯಂತ ಸೈಕಲ್ ತುಳಿದು ಲೋಕಯಾತ್ರೆ ಕೈಗೊಂಡಿದ್ದಾರೆ. ಯುರೋಪಿನ ಲಾತ್ವಿಯಾದ 47 ವರ್ಷದ ಮಹಿಳೆ ಇವಿಗಾ ಸೈಕಲ್ ಸಂಚಾರ ಮಾಡುತ್ತಿದ್ದಾರೆ.
ಹೋಟೆಲ್ ನಲ್ಲಿ ಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವಿಗಾ ಕೋವಿಡ್ ನಂತರ ಕೆಲಸ ಕಳೆದುಕೊಂಡರು. ದೇವರ ಕಾರಣದಿಂದಲೇ ಈ ಪರಿಸ್ಥಿತಿ ಎದುರಾಗಿದ್ದು, ದೈವ ಕೃಪೆಯನ್ನು ಅರ್ಥೈಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಪ್ರಪಂಚ ಪರ್ಯಟನೆ ಆಲೋಚನೆ ಮಾಡಿದ್ದರು. 2021ರಿಂದ ಸ್ವಂತ ಸೈಕಲ್ ಬಳಸಿ ಸಂಚಾರ ಮಾಡುತ್ತಿದ್ದಾರೆ.
ಪಾಕಿಸ್ತಾನ ಮೂಲಕ ಭಾರತ ಪ್ರವೇಶಿಸಿ ಆಗ್ರಾ – ಗೋವಾ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಯಾಣ ಮುಗಿಸಿ ಕೇರಳದತ್ತ ಇವಿಗಾ ಸೈಕಲ್ ತುಳಿಯುತ್ತಿದ್ದಾರೆ. ಮುಂದೆ ಇಂಡೋನೇಷ್ಯಾ, ಚೀನಾ ಮತ್ತು ಜಪಾನ್ ನಲ್ಲಿ ಸಂಚರಿಸಲಿದ್ದಾರೆ. ಪ್ರತಿನಿತ್ಯ 100-150 ಕಿಲೋಮೀಟರ್ ಸೈಕಲ್ ತುಳಿಯುವ ಇವರು ಈಗಾಗಲೇ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡವನ್ನು ಸಂಚರಿಸಿದ್ದಾರೆ.
ಕೇವಲ ಹೈಸ್ಕೂಲ್ ಶಿಕ್ಷಣವನ್ನು ಪಡೆದಿರುವ ಇವಿಗಾ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸಿದ ಪರಿಣಾಮ ರಷ್ಯನ್, ಜರ್ಮನ್, ಫ್ರೆಂಚ್, ಇಂಗ್ಲೀಷ್, ಇಟಾಲಿಯನ್ ಮತ್ತು ಸ್ಪ್ಯಾನಿಶ್ ಸೇರಿದಂತೆ ಹಲವು ಭಾಷೆಯನ್ನು ಕರಗತ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಸಹೋದರಿಯೊಂದಿಗೆ ಜೀವನ ನಡೆಸುತ್ತಿದ್ದ ಅವಿವಾಹಿತ ಇವಿಗಾ ಕುಟುಂಬದವರ ಸಂತೋಷಕ್ಕಾಗಿ ಶಿಕ್ಷಣವನ್ನು ತ್ಯಜಿಸಿ ಕೆಲಸಕ್ಕೆ ಸೇರಿಕೊಂಡಿದ್ದರು.
ಸೈಕಲ್ ಮೂಲಕ ಪ್ರಯಾಣಿಸುತ್ತಾ ಅದರೊಂದಿಗೆ ಸೋಲಾರ್ ಲ್ಯಾಂಪ್, ಸೋಲಾರ್ ಒಲೆ, ವಸತಿ ಮಾಡಲು ಅಗತ್ಯವಾದ ಟೆಂಟ್ ಹೊತ್ತು ತಂದಿದ್ದಾರೆ. ಮಹಿಳೆಯಾಗಿ ಸುರಕ್ಷತೆಯ ಸಮಸ್ಯೆ ಕಾಡುವುದಿಲ್ಲವೇ ಎಂದು ಪ್ರಶ್ನಿಸಿದರೆ, ಈ ಜಗತ್ತಿನಲ್ಲಿ ಎಲ್ಲವೂ ದೇವರಿಂದಲೇ ನಿರ್ಧಾರವಾಗುತ್ತದೆ. ದೈವ ಕೃಪೆ ಶೋಧನೆಗೆ ಪ್ರಯಾಣ ಬೆಳೆಸಿದ್ದೇನೆ. ಸುರಕ್ಷತೆಯ ಜವಾಬ್ದಾರಿಯೂ ದೇವರದ್ದೇ ಆಗಿದೆ ಎಂದು ಇವಿಗಾ ಉತ್ತರಿಸುತ್ತಾರೆ.
ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನರು ನನ್ನನ್ನು ಗಮನಿಸಿ ಮಾತನಾಡಿಸುತ್ತಿದ್ದಾರೆ. ಭಾರತ ಪುಣ್ಯಭೂಮಿ ಎಂದು ಕೇಳಿದ್ದೇನೆ. ಇಲ್ಲಿನ ವಾತಾವರಣ ಹೆಚ್ಚಾಗಿ ಹೊಂದಿಕೆಯಾಗಿದೆ ಎಂದು ಇವಿಗಾ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.