ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ಹರಾಜಿನಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ವಿಶೇಷ ಎಂದರೆ ಈ ಬಾರಿ ಮಿನಿ ಹರಾಜು ನಡೆಯುತ್ತಿದ್ದು, ಹೀಗಾಗಿ ಕೆಲ ಆಟಗಾರರು ದಾಖಲೆ ಮೊತ್ತಕ್ಕೆ ಹರಾಜಾಗಬಹುದು.
ಏಕೆಂದರೆ ಕಳೆದ ಸೀಸನ್ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸ್ಯಾಮ್ ಕರನ್ ಹರಾಜಾಗಿದ್ದರು. ಹಾಗಿದ್ರೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರರು ಯಾರೆಲ್ಲಾ ಎಂದು ನೋಡೋಣ…
1- ಸ್ಯಾಮ್ ಕರನ್: ಐಪಿಎಲ್ ಸೀಸನ್ 16 ಮಿನಿ ಹರಾಜಿನಲ್ಲಿ ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಬರೋಬ್ಬರಿ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲೇ ಆಟಗಾರನೊಬ್ಬನಿಗೆ ಸಿಕ್ಕ ಗರಿಷ್ಠ ಮೊತ್ತವಾಗಿದೆ.
2- ಕ್ಯಾಮರೋನ್ ಗ್ರೀನ್: ಐಪಿಎಲ್ 2023 ರ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ 17.50 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿತು. ಇದು ಐಪಿಎಲ್ ಹರಾಜಿನ 2ನೇ ಅತ್ಯಂತ ದುಬಾರಿ ಖರೀದಿಯಾಗಿದೆ. ಇದೀಗ ಗ್ರೀನ್ ಟ್ರೇಡ್ ಮೂಲಕ 17.50 ಕೋಟಿ ರೂ.ಗೆ ಆರ್ಸಿಬಿ ಪಾಲಾಗಿದ್ದಾರೆ.
3- ಬೆನ್ ಸ್ಟೋಕ್ಸ್: ಐಪಿಎಲ್ ಸೀಸನ್ 16 ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿ ರೂ. ನೀಡಿ ಖರೀದಿಸಿತ್ತು.
4- ಕ್ರಿಸ್ ಮೋರಿಸ್: ಐಪಿಎಲ್ 2021 ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿಗೆ ಖರೀದಿಸಿತ್ತು. ಇದು ಅಂದಿನ ದಾಖಲೆಯ ಹರಾಜು ಮೊತ್ತವಾಗಿತ್ತು.
5- ನಿಕೋಲಸ್ ಪೂರನ್: ಐಪಿಎಲ್ 2023ರ ಮಿನಿ ಹರಾಜಿನಲ್ಲಿ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ 16 ಕೋಟಿಗೆ ಬಿಕರಿಯಾಗಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ದುಬಾರಿ ಮೊತ್ತ ನೀಡಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ನನ್ನು ತನ್ನದಾಗಿಸಿಕೊಂಡಿತು.
6- ಯುವರಾಜ್ ಸಿಂಗ್: ಐಪಿಎಲ್ 2015 ರ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಫ್ರಾಂಚೈಸಿಯು ಯುವರಾಜ್ ಸಿಂಗ್ ಅವರನ್ನು ಬರೋಬ್ಬರಿ 16 ಕೋಟಿಗೆ ಖರೀದಿಸಿತ್ತು. ಇದು ಐಪಿಎಲ್ ಹರಾಜಿನಲ್ಲಿ ಭಾರತೀಯ ಆಟಗಾರನಿಗೆ ಸಿಕ್ಕ ಗರಿಷ್ಠ ಮೊತ್ತವಾಗಿದೆ.
7- ಪ್ಯಾಟ್ ಕಮಿನ್ಸ್: ಐಪಿಎಲ್ 2020ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಅವರನ್ನು ಬರೋಬ್ಬರಿ 15.50 ಕೋಟಿಗೆ ಖರೀದಿಸಿತ್ತು.
8- ಇಶಾನ್ ಕಿಶನ್: ಐಪಿಎಲ್ 2022 ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇಶಾನ್ ಕಿಶನ್ ಅವರಿಗೆ 15.25 ಕೋಟಿ ರೂ. ನೀಡಿತ್ತು.
ಅಂದರೆ ಐಪಿಎಲ್ ಇತಿಹಾಸದಲ್ಲಿ ಕೇವಲ 9 ಆಟಗಾರರು ಮಾತ್ರ 15 ಕೋಟಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾಗಿದ್ದಾರೆ.