ಎನ್‌ಸಿಪಿ ನಿಜವಾದ ನಾಯಕ ಯಾರು – ಯಾರ ಕಡೆಗೆ ಹೋಗ್ತಾರೆ ಹೆಚ್ಚಿನ ಶಾಸಕರು?

ಮುಂಬೈ: ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆ ದೇಶದ ಗಮನ ಸೆಳೆದಿದೆ. ಶರದ್‌ ಪವಾರ್‌ ಮತ್ತು ಅಜಿತ್‌ ಪವಾರ್‌ ಫೈಟ್‌ ಮುಂದುವರಿದಿದ್ದು, ಎನ್‌ಸಿಪಿ (NCP) ನಿಜವಾದ ನಾಯಕ ಯಾರು ಎಂಬುದು ಇಂದು (ಬುಧವಾರ) ಗೊತ್ತಾಗಲಿದೆ.

ಪಕ್ಷದ ಬಹುಪಾಲು ಶಾಸಕರು ತಮ್ಮೊಂದಿಗೆ ಇದ್ದಾರೆ ಎಂಬುದನ್ನು ನಿರೂಪಿಸಲು ಎರಡು ಎನ್‌ಸಿಪಿ ಬಣಗಳು ಇಂದು ಮುಂಬೈನಲ್ಲಿ ಪ್ರಮುಖ ಸಭೆಗಳನ್ನು ನಡೆಸಲಿವೆ. ಕಳೆದ ವಾರ ಅಜಿತ್ ಪವಾರ್ ಬಂಡಾಯವೆದ್ದು ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಯಾದಾಗಿನಿಂದ ಪಕ್ಷವು ಬೆಂಕಿಯ ಕೆನ್ನಾಲಿಗೆಯಲ್ಲಿದೆ.

ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳುವಂತೆ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಭಾನುವಾರ ಪಕ್ಷದ ಮುಖ್ಯ ಸಚೇತಕರಾಗಿ ನೇಮಕಗೊಂಡ ಜಿತೇಂದ್ರ ಅವದ್ ಅವರು ವಿಪ್ ಜಾರಿ ಮಾಡಿದ್ದರು.

ಎನ್‌ಸಿಪಿಯ ಕಾರ್ಯಾಧ್ಯಕ್ಷರು ಈ ಸಂಬಂಧ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಹಾಜರಾಗುವಂತೆ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ, ಮುಂದಿನ ನಡೆ ಬಗ್ಗೆ ಶರದ್ ಪವಾರ್ ಅವರಿಂದ ಮಾರ್ಗದರ್ಶನ ಪಡೆಯುವಂತೆ ಒತ್ತಾಯಿಸಿದ್ದಾರೆ. 

ಇತ್ತ ಬಾಂದ್ರಾದಲ್ಲಿರುವ ಮುಂಬೈ ಎಜುಕೇಷನ್‌ ಟ್ರಸ್ಟ್‌ ಆವರಣದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಪ್ರತಿಸ್ಪರ್ಧಿ ಗುಂಪು ಪಕ್ಷದ ಬಹುಪಾಲು ಶಾಸಕರ ಬೆಂಬಲವನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ ಪ್ರತ್ಯೇಕ ಸಭೆ ನಡೆಸುತ್ತಿದೆ.

ಯಾರ ಸಭೆಗೆ ಎಷ್ಟು ಮಂದಿ‌‌ ಶಾಸಕರು ಭಾಗಿಯಾಗ್ತಾರೆ ಎಂಬುದು ಈಗಿರುವ ಕುತೂಹಲ. ಎನ್‌ಸಿಪಿ ಅಸಲಿ ನಾಯಕತ್ವದ ಬಗ್ಗೆ ಇಂದಿನಿ ಸಭೆಯಲ್ಲಿ ಉತ್ತರ ಸಿಗಲಿದೆ.