ಬೆಳಗಾವಿ: ಜಿಲ್ಲೆಯ ಎಸಿ ಕಚೇರಿಯ ಗ್ರೇಡ್- 2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ‌್ ಮಣ್ಣಿಕೇರಿ ಜೂನ್ 29ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಇತ ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾಗಿದ್ದ ವೇಳೆ ಅವರ ಆಪ್ತ ಸಹಾಯಕರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಇದೀಗ ತಹಶೀಲ್ದಾರ್ ಅಶೋಕ ಮಣ್ಣಿಕೇರಿ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು ಜೂನ್ 23ರಂದು ಬರೆದಿಟ್ಟಿದ್ದ ಡೆತ್ ನೋಟ್ ಪೊಲೀಸ್ ಪರಿಶೀಲನೆ ವೇಳೆ ಎಸಿ ಕಚೇರಿಯ ಲಾಕರ್ನಲ್ಲಿ ಪತ್ತೆಯಾಗಿದೆ.
ಇನ್ನು ಡೆತ್ನೋಟ್ನಲ್ಲಿ ‘ನನ್ನ ಸಾವಿಗೆ ಪತ್ನಿ ಭೂಮಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದರ ಜೊತೆಗೆ ಕಿರುಕುಳ ನೀಡ್ತಿದ್ದಾಳೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ತಹಶೀಲ್ದಾರ್ ಹುದ್ದೆಗೆ ಸ್ವಯಂ ನಿವೃತ್ತಿ ಪಡೆಯಲು ಸಿದ್ದಪಡಿಸಿದ್ದ ಪತ್ರ ಕೂಡ ಪತ್ತೆಯಾಗಿದೆ. ಬೆಳಗಾವಿ ಉಪವಿಭಾಗ ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ್, ಪತ್ನಿ ಭೂಮಿಯನ್ನ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಜೂನ್ 29ರಂದು ಮನೆಯಲ್ಲಿ ಹೃದಯಾಘಾತದಿಂದ ಸಾವು ಎಂದು ಪ್ರಕರಣ ಬೆಳಕಿಗೆ ಬಂದಿತ್ತು.
ಇವರ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಅಶೋಕ್ ಮಣ್ಣಿಕೇರಿ ಪತ್ನಿ ಭೂಮಿ ಮತ್ತು ಆಕೆಯ ಸಹೋದರ ಸ್ಯಾಮ್ಯುಯೆಲ್ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿತ್ತು. ಅಶೋಕ್ ಕುಟುಂಬಸ್ಥರು ಈ ಬಗ್ಗೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿ, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಅದರಂತೆ ಪರಿಶೀಲನೆ ವೇಳೆ ಡೆತ್ನೋಟ್ ಪತ್ತೆಯಾಗಿದೆ.
ಘಟನೆ ವಿವರ
ಇನ್ನು ತಹಶೀಲ್ದಾರ್ ಅಶೋಕ್ ಮಣ್ಣಿಕೇರಿ ಕುಟುಂಬ ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ತಡರಾತ್ರಿ ಹೃದಯಾಘಾತವಾಗಿದೆ ಎಂದು ಅಶೋಕ್ ಪತ್ನಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯೆಲ್ ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ, ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲಿಯೇ ತಹಶೀಲ್ದಾರ್ ಕೊನೆಯುಸೆರೆಳೆದಿದ್ದರು. ಈ ಹಿನ್ನೆಲೆ ಅಶೋಕ್ ಸಾವಿನ ಹಿಂದೆ ಅನುಮಾನಗಳು ವ್ಯಕ್ತವಾಗಿತ್ತು. ಇನ್ನು ಮೃತ ಅಶೋಕ್ ಕುಟುಂಬಸ್ಥರು ಭೂಮಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯೆಲ್ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಆ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಇಬ್ಬರನ್ನು ಕರೆದುಕೊಂಡು ಹೋಗಿದ್ದರು. ಇದೀಗ ಎಫ್ ಎಸ್ ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.