ಸಿದ್ದಾಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಪೆಢರೇಶನ್ ವತಿಯಿಂದ ತಾಲೂಕಿನಲ್ಲಿ ಮಧ್ಯಾಹ್ನದ ಬಿಸಿಯೂಟ ಬಂದ್ ಮಾಡಿ ಪ್ರತಿಭಟಿಸಲಾಯಿತು. ಸರ್ಕಾರ ಘೋಷಣೆ ಮಾಡಿದಂತೆ ಹೆಚ್ಚುವರಿ ಗೌರವಧನ ನೀಡದೇ ಇರುವುದನ್ನು ಖಂಡಿಸಿ ಕೆಲಸದ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಬಾಲಭವನದಲ್ಲಿ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ನಂತರ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಬಿಸಿಯೂಟ ತಯಾರಕರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಕನಿಷ್ಠ ವೇತನ, ಪಿಎಫ್, ಇ.ಎಸ್.ಐ, ಅಪಘಾತ ವಿಮೆ, ಮರಣ ವಿಮೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿ ತಿಂಗಳು 5ನೇ ತಾರಿಕಿನ ಒಳಗೆ ವೇತನ ಕೊಡಬೇಕೆಂದು ನಿಯಮವಿದ್ದರೂ 3-4 ತಿಂಗಳಿಗೊಮ್ಮೆ ಸಂಬಳ ನೀಡುವುದನ್ನು ಖಂಡಿಸಿ ಸಕಾಲಕ್ಕೆ ವೇತನ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಪೆಡರೇಶನ್ ರಾಜಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅವರಗೆರೆ ಚಂದ್ರು, ಪರಮೇಶ್ವರ ಹೊಸಕೊಪ್ಪ, ಸಿದ್ದಾಪುರ ತಾಲೂಕಾ ಅಧ್ಯಕ್ಷೆ ಸರಸ್ವತಿ ಭಟ್, ಉಪಾಧ್ಯಕ್ಷರಾದ ಭುವನೇಶ್ವರಿ ನಾಯ್ಕ, ಮೀನಾಕ್ಷಿ ಹಲಗೇರಿ, ಖಜಾಂಚಿ ಶಮೀಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.