ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕ- ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ


ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲನ್ನು ಓಡಿ ಹೋಗಿ ಹತ್ತುವ ವೇಳೆ ಆಯತಪ್ಪಿ ಬೀಳುತ್ತಿರುವುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಿಸಿದ ಘಟನೆ ನಡೆದಿದೆ..

ರೈಲ್ವೆ ನಿಲ್ದಾಣಗಳಲ್ಲಿ ನಿರ್ಲಕ್ಷ್ಯದಿಂದ ಇಲ್ಲವೇ ವಿಧಿಯ ಆಟವೇ ಎಂಬಂತೆ ಪ್ರಾಣಕ್ಕೆ ಕುತ್ತಾಗುವಂತಹ ಘಟನೆಗಳು ನಡೆಯುತ್ತಿರುತ್ತವೆ. ಇವು ಒಮ್ಮೆಲೇ ಜೀವ ಹಿಂಡುತ್ತವೆ. ಈ ವೇಳೆ ಆಪತ್ಭಾಂಧವರಂತೆ ಕೆಲವರು ರಕ್ಷಣೆ ಮಾಡುತ್ತಾರೆ. ಅವರು ದೇವರ ರೂಪವೇ ಸರಿ ಎಂದು ಬದುಕುಳಿದವರು ಉದ್ಘರಿಸುವುದು ಸಾಮಾನ್ಯವಾಗಿದೆ.

ಕಳೆದ ರವಿವಾರ ರಾತ್ರಿ ಗೋವಾ ಮಡ್ಗಾವ್ ನಿಂದ ಎರ್ನಾಕುಲಂ ಕಡೆಗೆ ಪ್ರಯಾಣಿಸುತ್ತಿದ್ದ ರೈಲೊಂದು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಿಂತ ವೇಳೆ ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಇಳಿದು ತಮಗೆ ಬೇಕಾದ ತಂಪು ಪಾನಿಯಗಳನ್ನ ಖರೀದಿಸಿ ಪುನಃ ತೆರಳುವ ವೇಳೆಗಾಗಲೇ ರೈಲು ಚಲಿಸಲು ಪ್ರಾರಂಭವಾಗಿದೆ. ಈ ವೇಳೆ ಕೆಲ ಪ್ರಯಾಣಿಕರು ಓಡುತ್ತ ರೈಲು ಹತ್ತಿದರೆ ಓರ್ವ ಪ್ರಯಾಣಿಕ ತನ್ನ ದೇಹದ ಬಾರದಿಂದ ಓಡಿ ರೈಲನ್ನು ಹತ್ತವ ವೇಳೆ ಕಾಲು ಜಾರಿ ರೈಲಿನಡಿ ಸಿಲುಕುತ್ತಿರುವ ವೇಳೆ ರೈಲ್ವೆ ಸಿಬ್ಬಂದಿ ಯೋಗೀಶ ನಾಯ್ಕ ಮಣ್ಕುಳಿ ತಕ್ಷಣ ತನ್ನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕನ ಸಹಾಯಕ್ಕೆ ಧಾವಿಸಿ ಆತನನ್ನು ಬಚಾವ್‌ ಮಾಡಿದ್ದಾರೆ.



ದೇವರಂತೆ ಬಂದು ಪ್ರಾಣ ಉಳಿಸಿದ ರೈಲ್ವೆ ಸಿಬಂದಿ ಯೋಗೀಶ ನಾಯ್ಕರಿಗೆ ಪ್ರಯಾಣಿಕ ಧನ್ಯವಾದ ಸಲ್ಲಿಸಿ ಮುಂದಿನ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಈ ಘಟನೆಯ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ಯೋಗೀಶ ನಾಯ್ಕ ಮಣ್ಕುಳಿ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಉದಯ ನಾಯ್ಕ ನುಡಿಸಿರಿ ನ್ಯೂಸ್‌, ಭಟ್ಕಳ