ಡಿಕೆ ಶಿವಕುಮಾರ್​ ಕೇಸ್ ವಾಪಸ್: ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕಾನೂನುಬಾಹಿರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್​​​ 24: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ, ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ನೀಡಿ ಆದೇಶಿಸಿತ್ತು. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ನೀಡಿದ್ದ ಆದೇಶವನ್ನ ವಾಪಸ್ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಿಬಿಐ ತನಿಖೆಗೆ ಅನುಮತಿ ನೀಡಿದ್ದು ಕಾನೂನುಬಾಹಿರ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆಯನ್ನು ಸಿಬಿಐಗೆ ವಹಿಸುವಾಗ ಡಿ.ಕೆ.ಶಿವಕುಮಾರ್​​ ಶಾಸಕರಾಗಿದ್ದರು. ಸಿಬಿಐ ತನಿಖೆಗೆ ನೀಡುವ ಮುನ್ನ ಸ್ಪೀಕರ್​ ಅನುಮತಿ ಪಡೆದಿರಲಿಲ್ಲ. ಸ್ಪೀಕರ್‌ ಅನುಮತಿ ಪಡೆದ ಬಳಿಕ ಸಿಎಂ ಆದೇಶ ಹೊರಡಿಸಬೇಕು. ಎಜಿ ಅವರು ಅಭಿಪ್ರಾಯ ಸಲ್ಲಿಸುವ ಮೊದಲೇ ಸಿಬಿಐಗೆ ವಹಿಸಿದ್ದರು. ಅಂದಿನ ಸಿಎಂ ಮೌಖಿಕ ಆದೇಶ ನೀಡಿದ್ದರು ಎಂದಿದ್ದಾರೆ.

ಸಿಎಂ ರವರ ಮೌಖಿಕ ಮಾಹಿತಿ ಮೇರೆಗೆ ಸಿಎಸ್‌ ಆದೇಶ ಪ್ರಕಟಿಸಿದ್ದಾರೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಆಗುತ್ತೆಂಬ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.

ಸೇಫ್ ಸಿಟಿ ಯೋಜನೆ ಬೆಂಗಳೂರು ಜನರ ಸುರಕ್ಷಿತೆ ಒದಗಿಸತ್ತೆ

ಇವತ್ತು ನಿರ್ಭಯ ಯೋಜನೆ ಅಡಿಯಲ್ಲಿ ಸೇಫ್ ಸಿಟಿ ಯೋಜನೆಯಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ಮಾಡಲಾಗಿದೆ. ಈ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಈ ಯೋಜನೆಗೆ 661.5 ಕೋಟಿ ರೂ ಆಗಿದೆ. ಕೇಂದ್ರ ಸರ್ಕಾರ 60, ರಾಜ್ಯ ಸರ್ಕಾರ 40 ಪರ್ಸೆಂಟ್ ನೀಡಿದೆ. ಬೆಂಗಳೂರು ಜನರ ಸುರಕ್ಷಿತೆ ಒದಗಿಸತ್ತೆ.  ಮಹಿಳೆಯರು ಮಕ್ಕಳಿಗೆ ಸಹಾಯ ಆಗುತ್ತೆ ಎಂದು ತಿಳಿಸಿದ್ದಾರೆ.

ದೌರ್ಜನ್ಯ ಅಥವಾ ಅಪಘಾತ ಆದಾಗ ಪೊಲೀಸರು ಕೆಲಸ ಮಾಡುತ್ತಾರೆ. ನೇರವಾಗಿ ಕರೆ ಮಾಡಬಹುದು ಏಳು ನಿಮಿಷಗಳ ಒಳಗೆ ಸ್ಪಾಟ್​ಗೆ ತಲುಪುತ್ತಾರೆ. ಎಂಟು ದೇಶದಲ್ಲಿ ಯೋಜನೆ ಆಗುತ್ತಿದೆ. ಸಂಪೂರ್ಣ ಮುಗಿಸಿದ ಆರಂಭ ಮಾಡಿರುವುದು ನಮ್ಮ ರಾಜ್ಯದಲ್ಲಿ ಎಂದು ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಸಿಬಿಐ ತನಿಖೆ ನೀಡಿದ್ದ ಅನುಮತಿ ವಾಪಸ್ ಪಡೆದ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಅಂದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸಮ್ಮತಿ ನೀಡಿದ್ದ ಆದೇಶ ಕಾನೂನು ಬಾಹಿರ ಅಂತಾ ನಿರ್ಧರಿಸಿ ಈ ಆದೇಶವನ್ನ ಹಿಂಪಡೆಯಲು ನಿರ್ಧರಿಸಲಾಗಿತ್ತು.

ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಇದೇ ವಿಚಾರವಾಗಿ ಚರ್ಚೆ ಕೂಡ ನಡೆದಿದೆ. ಸಿಎಂ ಸಿದ್ದರಾಮಯ್ಯ ಭೇಟಿಯಾದ ಗೃಹ ಸಚಿವ ಪರಮೇಶ್ವರ್, ಅರ್ಧಗಂಟೆಗೂ ಅಧಿಕ ಕಾಲ ಚರ್ಚೆ ಮಾಡಿದ್ದಾರೆ. ಈ ಮಧ್ಯೆ ನಿನ್ನೆ ಸಂಪುಟ ಸಭೆಗೆ ಡಿಕೆ ಶಿವಕುಮಾರ್ ಗೈರಾಗಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ಯಾರು ಮಾತನಾಡಬೇಕೋ ಅವರೇ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.