ಕಾರವಾರ: ಜಿಲ್ಲೆಯಲ್ಲಿ ಆಹಾರ ಕಲಬೆರೆಕೆ ಪತ್ತೆ ಹಚ್ಚುವ ತಂಡವನ್ನು ರಚಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ದೇಶದ ಜನತೆಗೆ ಗುಣಮಟ್ಟದ ಆಹಾರ ದೊರಕಬೇಕೆಂಬ ಉದ್ದೇಶವನ್ನು ಹೊಂದಿದೆ. ಬೇರೆ ಬೇರೆ ಕಡೆಗಳಲ್ಲಿ ಕಲಬೆರಕೆ ಅಡುಗೆ ಎಣ್ಣೆ ಹಾಗೂ ಅಗ್‌ಮಾರ್ಕ ಲೈಸನ್ಸ್ ಪಡೆಯದ ಮಿಶ್ರಣ ಎಣ್ಣೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ರೆಗ್ಯೂಲೇಷನ್‌ನಂತೆ ಅಲ್ಲಲ್ಲಿ ಕೆಲವೊಂದು ಪ್ರಕರಣಗಳು ದಾಖಲಾಗಿದ್ದು, ತ್ರೈ ಮಾಸಿಕ ಸರ್ವೇಕ್ಷಣಾ ಹಾಗೂ ಜಾರಿ ಆಂದೋಲನ ವರದಿಗಳನ್ನು ಪರಿಶೀಲಿಸಿದಾಗ ಅಡುಗೆ ಎಣ್ಣೆಯು ಅತಿಹೆಚ್ಚು ಕಲಬೆರಕೆ ಮತ್ತು ಪ್ಯಾಕೆಟ್ ಮೇಲೆ ಲೇಬಲ್‌ಗಳನ್ನು ಸರಿಯಾಗಿ ಹಾಕದೆ ಇರುವುದು ಕಂಡುಬಂದಿದೆ. ದೇಶದಾದ್ಯಂತ ಆ.1 ರಿಂದ 14 ರವರೆಗೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಅಡುಗೆ ಎಣ್ಣೆಯಲ್ಲಿ ಕಲಬೆರಕೆ, ಎಣ್ಣೆಯಲ್ಲಿ ಟ್ರಾನ್ಸಫ್ಯಾಟಿ ಆಸಿಡ್ ಅಂಶ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್ ಮಾರ್ಕ ಲೈಸನ್ಸಿರದೇ ಇರುವ ಮಲ್ಟಿಸೋರ್ಸ್ ಅಡುಗೆ ಎಣ್ಣೆ ಮತ್ತು ಪ್ಯಾಕೆಟ್ ಮಾಡದೇ ಮಾರಾಟ ಮಾಡುವವರನ್ನು ಪತ್ತೆಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.
ಅದರಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಆಹಾರ ಕಲಬೆರೆಕೆ ಪತ್ತೆ ಹಚ್ಚುವ ತಂಡವನ್ನು ರಚಿಸಲಾಗಿದ್ದು, ಆ.2 ರಿಂದ 14 ರವರೆಗೆ ಜಿಲ್ಲೆಯಾದ್ಯಂತ ಬೇರೆ ಬೇರೆ ಅಂಗಡಿಗಳಿಗೆ ಭೇಟಿ ಕೊಟ್ಟು ಅಡುಗೆ ಎಣ್ಣೆ ಆಹಾರ ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಲಾಗುವುದು. ಈಗಾಗಲೇ ನಿಷೇಧವಾಗಿರುವ ಪ್ಯಾಕೇಟ್ ಇಲ್ಲದೆ ಮಾರಾಟ ಮಾಡುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಅಂಕಿತ ಅಧಿಕಾರಿ ತಿಳಿಸಿದ್ದಾರೆ.