ಕಾರವಾರ: ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಕೆಲಸಕ್ಕೆ ಏನು ಕೊಟ್ಟರೂ ಕಡಿಮೆ. ಅವರ ಸೇವೆ ಗಮನಿಸಿ ನನ್ನಿಂದಾದ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು. ನಗರದ ತಾಪಂ ಸಭಾಭವನದಲ್ಲಿ ಬುಧವಾರ ಕಾರವಾರ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಸೀರೆ, ಛತ್ರಿ ಕೊಡುಗೆಯಾಗಿ ನೀಡಿ, ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಕುಟುಂಬದಲ್ಲಿ ಬಡತನ, ಏನೆಲ್ಲ ಸಮಸ್ಯೆಗಳಿದ್ದರೂ ಅವೆಲ್ಲವನ್ನೂ ನುಂಗಿಕೊAಡು ಸಮಾಜಸೇವೆ ಮಾಡುತ್ತಾರೆ. ಸರ್ಕಾರದ ಯಾವುದೇ ಯೋಜನೆ ಬಂದರೂ ನೆರವಾಗುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುತ್ತಾರೆ. ಇವರು ಮಾಡುವ ಕೆಲಸಕ್ಕೆ ಏನು ಕೊಟ್ಟರೂ ಕಡಿಮೆ. ಆದರೆ ನಾನು ಅಳಿಲು ಸೇವೆಯನ್ನು ಮಾಡಿದ್ದೇನೆ. ಇವರಿಗೆ ಇನ್ನೂ ಹೆಚ್ಚಿನ ಸಹಾಯ, ಸೌಲಭ್ಯ ಕಲ್ಪಿಸುವ ಅಗತ್ಯತೆ ಇದೆ. ನೊಂದವರಿಗೆ ದೇವರ ಸ್ಥಾನದಲ್ಲಿದ್ದು ಆಶಾ ಕಾರ್ಯಕರ್ತೆಯರು ನೆರವಾಗುತ್ತಿದ್ದಾರೆ ಎಂದರು.
ಆಶಾ ಕಾರ್ಯಕರ್ತರನ್ನು ಕಾಯಂ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು ಇವರೆಲ್ಲರ ಬೇಡಿಕೆಯಷ್ಟೇ ಅಲ್ಲ. ನನ್ನ ಬೇಡಿಕೆಯೂ ಹೌದು. ಆ ನಿಟ್ಟಿನಲ್ಲಿ ನಾನೂ ಪ್ರಯತ್ನಿಸುತ್ತೇನೆ. ಒಂದಲ್ಲ ಒಂದು ದಿನ ಆಗೇ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಎನ್. ಎಫ್. ನರೋನ್ಹಾ, ತಾಲೂಕು ಆರೋಗ್ಯ ಅಧಿಕಾರಿ ಸೂರಜಾ ನಾಯ್ಕ, ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸುಭಾಷ ಗುನಗಿ ಮತ್ತಿತರರು ಉಪಸ್ಥಿತರಿದ್ದರು.
ಶಾಸಕರು ತಾಲ್ಲೂಕಿನ 130 ರಷ್ಟು ಆಶಾ ಕಾರ್ಯಕರ್ತೆಯರಿಗೆ ಸೀರೆ, ಛತ್ರಿ ನೀಡಿರುವುದು ಖುಷಿಯ ಸಂಗತಿ. ಈ ಹಿಂದೆಯೂ ಕೊರೋನಾ ಸಂದರ್ಭದಲ್ಲಿ ಶಾಸಕರು ಆಶಾ ಕಾರ್ಯಕರ್ತೆಯರ ನೆರವಿಗೆ ಬಂದಿದ್ದರು.
– ಪ್ರಿಯಾ ಪಡ್ತಿ, ಆಶಾ ಕಾರ್ಯಕರ್ತೆ ಹಳಗಾ
ಆಶಾ ಕಾರ್ಯಕರ್ತೆಯರು ಕಷ್ಟ, ನಷ್ಟದ ನಡುವೆಯೂ ಉತ್ತಮವಾಗಿ ಜನಸೇವೆ ಮಾಡುತ್ತಿದ್ದಾರೆ. ಅವರಿಗೆ ನನ್ನಿಂದಾದ ಚಿಕ್ಕ ಸಹಾಯ ಮಾಡಿದ್ದೇನೆ. ಆಶಾ ಕಾರ್ಯಕರ್ತೆಯರೊಂದಿಗೆ ಸದಾ ಇರುತ್ತೇನೆ.
– ರೂಪಾಲಿ ಎಸ್.ನಾಯ್ಕ
ಶಾಸಕರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ