ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ಜೀವನ ಹಸನು: ರಾಘವೇಶ್ವರ ಶ್ರೀ

ಗೋಕರ್ಣ: ಸಿಟ್ಟು ನಿಯಂತ್ರಣಕ್ಕೆ ಬಂದಷ್ಟೂ ನಮ್ಮ ಜೀವನ ಹಸನಾಗುತ್ತದೆ. ನಮ್ಮ ಕೋಪ, ತೊಂದರೆಗಳಿಗೆ ನಮ್ಮ ಕರ್ಮಗಳೇ ಕಾರಣ ಎಂಬ ಭಾರತೀಯರ ಕರ್ಮ ಸಿದ್ಧಾಂತವನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಯಾರ ಮೇಲೂ ಸಿಟ್ಟು ಮಾಡಿಕೊಳ್ಳುವ ಪ್ರಮೇಯವೇ ಉದ್ಭವಿಸುವುದಿಲ್ಲ ಅಥವಾ ಯಾರನ್ನೂ ನಾವು ದ್ವೇಷಿಸುವುದಿಲ್ಲ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕೋಪ ನಮ್ಮ ಬದುಕಿನಲ್ಲಿ ಗೆಲ್ಲಲು ಕಷ್ಟಸಾಧ್ಯ ಎನಿಸಿದ ಶತ್ರು ಎಂದು ಧರ್ಮರಾಯ ಹೇಳಿದ ಉಲ್ಲೇಖ ಮಹಾಭಾರತದಲ್ಲಿದೆ. ಸಿಟ್ಟನ್ನು ಗೆಲ್ಲುವುದು ಸುಲಭವಲ್ಲ. ಅದಕ್ಕೆ ಸಾಧನೆ ಬೇಕು. ವಿಶ್ವಾಮಿತ್ರನಂಥವರೂ ಕಾಮ, ಕ್ರೋಧ ಗೆಲ್ಲಲು ಪಟ್ಟ ಕಷ್ಟ ಅಪಾರ ಎಂದು ಉದಾಹರಣೆ ಸಹಿತ ವಿವರಿಸಿದರು.

ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕೇವಲ ದೇವರು ಅಥವಾ ಸಂತರಿಗೆ ಸಂಬಂಧಿಸಿದ್ದಲ್ಲ. ಜನಸಾಮಾನ್ಯರಿಗೂ ಅದು ಪ್ರಮುಖವಾಗುತ್ತದೆ. ನಾವು ತಪ್ಪು ಮಾಡುವುದು ಮನಸ್ಸಿನ ಹತೋಟಿ ಕಳೆದುಕೊಂಡಾಗ. ಆದ್ದರಿಂದ ಜೀವನ ಸರಿದಾರಿಯಲ್ಲಿ ಸಾಗಲು ನಮ್ಮ ಮನಸ್ಸಿನ ಮೇಲೆ ನಾವು ನಿಯಂತ್ರಣ ಸಾಧಿಸಬೇಕು ಎಂದು ಬಣ್ಣಿಸಿದರು.

ನಿವೃತ್ತ ಡಿಎಫ್‌ಓ ನಾಗರಾಜ್ ನಾಯ್ಕ್ ತೊರಕೆಯವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಹೊನ್ನಾವರದ ತಾರಾ ಭಟ್ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹವನ, ಚಂಡೀ ಪಾರಾಯಣ, ನವಗ್ರಹ ಹೋಮ ಹಾಗೂ ಮಹಾ ಗಣಪತಿ ಹವನ ನಡೆಯಿತು. ಮೂರೂರು, ಮಿರ್ಜಾನ್-ಅಚವೆ, ಮೂರೂರು-ಕಲ್ಲಬ್ಬೆ, ಧಾರೇಶ್ವರ ವಲಯಗಳ ಶಿಷ್ಯಭಕ್ತರಿಂದ ಗುರು ಭಿಕ್ಷಾಸೇವೆ ನೆರವೇರಿತು.