ಕಾರವಾರ: ಕಾರವಾರ ತಾಲೂಕಿನ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಟೇಗಾಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಭೀಮ್‌ಕೋಲ್ ಕೆರೆ ಹಾಗೂ ಸ್ವಚ್ಛ ಭಾರತ ಮಿಷನ್ ಅಡಿ ನಿರ್ಮಿಸಲಾದ ಸ್ವಚ್ಛ ಸಂಕೀರ್ಣ ಘಟಕವನ್ನು ಬುಧವಾರ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ನರೇಗಾ ಯೋಜನೆ ಸಾಕಷ್ಟು ಅನುಕೂಲಕರವಾಗಿದೆ. ನರೇಗಾದಡಿ ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಭೀಮ್‌ಕೋಲ್ ನಂತಹ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಜನರೂ ಸಹಕರಿಸಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಯಿಂದ ನರೇಗಾದಡಿ ಅಭಿವೃದ್ಧಿ ಪಡಿಸಿದ ಕೆರೆಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕಿದೆ ಎಂದರು.
ನಂತರ ನರೇಗಾದಡಿ ಎರಡನೇ ಹಂತದಲ್ಲಿ ಕೈಗೊಳ್ಳಲಿರುವ ಭೀಮ್‌ಕೋಲ್ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಜೊತೆಗೆ ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಿದರು. ಭೀಮ್‌ಕೋಲ್ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಶ್ರಮಿಸಿದ ತಾಂತ್ರಿಕ ಸಂಯೋಜಕ ಅನಿಲ ಗಾಯತ್ರಿ, ಸಹಾಯಕ ತಾಂತ್ರಿಕ ಸಂಯೋಜಕ ಚಂದ್ರು ಗೌಡ, ಸಾಮಗ್ರಿ ಪೂರೈಕೆದಾರ ವಿಜಯ ಪಡವಳಕರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಾಲಪ್ಪನವರ ಆನಂದಕುಮಾರ, ನರೇಗಾ ಸಹಾಯಕ ನಿರ್ದೇಶಕ ರಾಮದಾಸ್ ನಾಯ್ಕ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜನಿಯರ್ ಪೂರ್ಣಿಮಾ, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳಾದ ಗಜು ನಾಯ್ಕ್, ಕಿರಣ ಎಂ, ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜನಾ ಪವಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.