ಕದಂಬ ಸೈನ್ಯ ಸರಳಗಿ ಘಟಕದ ವತಿಯಿಂದ 12ನೇ ವಾರ್ಷಿಕ ಸ್ನೇಹ ಸಮ್ಮೇಳನ & ಕನ್ನಡ ರಾಜ್ಯೋತ್ಸವ ಸಾಧಕರಿಗೆ ಸನ್ಮಾನ

ಹೊನ್ನಾವರ :ತಾಲೂಕಿನ ಸರಳಗಿಯ ಉಪ್ಪಾರ ಸಮಾಜ ಮಂದಿರದ ಆವಾರದಲ್ಲಿ ರಾಜ್ಯ ಕನ್ನಡ ಪರ ಸಂಘಟನೆ ಕದಂಬ ಸೈನ್ಯದ ಸರಳಗಿ ಘಟಕದ ವತಿಯಿಂದ 12ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಕನ್ನಡ ರಾಜ್ಯೋತ್ಸವ,ಸಾಧಕರಿಗೆ ಸನ್ಮಾನ ನೆರವೇರಿತು,ಗ್ರಾಮೀಣ ಪ್ರದೇಶವಾದರು ಕನ್ನಡದ ಹಬ್ಬ ಎನ್ನುವ ರೀತಿಯಲ್ಲಿ ಅರ್ಥಪೂರ್ಣವಾಗಿ,ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿದರು.

ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ರಾಜ್ಯದಲ್ಲಿ ಅನೇಕ ಕನ್ನಡಪರ ಸಂಘಟನೆಗಳಿದ್ದರು ಕನ್ನಡತನವನ್ನು ಉಳಿಸುವಲ್ಲಿ ಪ್ರಧಾನ ಪಾತ್ರವಹಿಸಿರುವುದು ಕದಂಬ ಸೈನ್ಯ ಎಂದರೆ ತಪ್ಪಾಗಲಾರದು.ಮನೆಯಲ್ಲಿ ಆಡುವ ಭಾಷೆ ಯಾವುದಿದ್ದರು ಕನ್ನಡವನ್ನು ಪ್ರೀತಿಸಿ ಎಂದರು.ಸಂಘಟನೆಯಲ್ಲಿ ಸ್ವಾರ್ಥವಿರಬಾರದು.ಎಲ್ಲರನ್ನು ಒಗ್ಗೂಡಿಸಿ ಕಾರ್ಯಕ್ರಮ ಸಂಘಟನೆಯಾಗಬೇಕು.ಆ ಕಾರ್ಯ ಕಂದಬ ಸೈನ್ಯ ಸರಳಗಿ ಘಟಕ ಮಾಡುತ್ತಿದೆ ಎಂದು ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್ ಗೌಡ ಮಾತನಾಡಿ, ನಿಸರ್ಗ ಪ್ರಾಮಾಣಿಕಾಗಿ ತನ್ನ ಕರ್ತವ್ಯ ನಿರ್ವಹಿಸಿದಂತೆ ಇಲ್ಲಿನ ಕದಂಬ ಸೈನ್ಯ ಸಂಘಟನೆ ಕನ್ನಡದ ಸೇವೆ ಅಚ್ಚುಕಟ್ಟಾಗಿ,ಪ್ರಾಮಾಣಿಕವಾಗಿ ಕನ್ನಡಾಭಿಮಾನದೊಂದಿಗೆ ಸೇವೆ ಸಲ್ಲಿಸುತ್ತಿದೆ.ಈ ಸ್ಥಳದಲ್ಲಿ ಇಂದು ಕನ್ನಡದ ಹಬ್ಬ ನಡೆದಿದೆ.ಇದು ಅಭಿನಂದನಾರ್ಹ ಸಂಗತಿ ಎಂದು ಸಂಘಟನೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯ ರಾಜ್ಜ ಅಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ,ಕನ್ನಡಕ್ಕೆ ಸಂಕಷ್ಟ ಎದುರಾಗಿದೆ.ನಮ್ಮ ಭಾಷೆಯ ಮೇಲೆ ಅನ್ಯಭಾಷೆಯ ಆಕ್ರಮಣ ನಡೆಯುತ್ತಿದೆ.ನಾವು ಪರಕೀಯರಾಗುತ್ತಿದ್ದೇವೆ. ವ್ಯಾಪಾರೋದ್ಯಮಗಳು ಅನ್ಯಭಾಷಿಕರ ಪಾಲಾಗುತ್ತಿದೆ. ಕನ್ನಡ ಭಾಷೆಯ ಅಳಿವು-ಊಳಿವಿಗಾಗಿ ನಾವೆಲ್ಲಾ ಕಂಕಣಬದ್ದರಾಗಬೇಕು. ಉತ್ತರಕನ್ನಡ ಜಿಲ್ಲೆಯ ಜನ ಕದಂಬಸೈನ್ಯವನ್ನು ಮೇರುಪರ್ವತಕ್ಕೆರಿಸಿದ್ದಾರೆ. ಇದು ವೀರರಭೂಮಿ,ಇಂತಹ ನೆಲದಲ್ಲಿ ಕನ್ನಡ ಕಟ್ಟುವ ಕೆಲಸವಾಗಿದೆ.ಈ ಮೂಲಕ ಕರ್ನಾಟಕಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಿರಿ ಎಂದು ಸರಳಗಿ ಘಟಕದ ಸಂಘಟಕರನ್ನು ಅಭಿನಂಧಿಸಿದರು.

ಪತ್ರಕರ್ತ ಉದಯಕುಮಾರ್ ಪಿ. ಕಾನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ,ಕನ್ನಡಕ್ಕಾಗಿ ಹೋರಾಡಿದವರು,ಕನ್ನಡಕ್ಕೆ ಕುತ್ತು ಬಂದಾಗ ನೆನಪಾಗುವವರು ಕದಂಬರು.ಅವರ ಹೆಸರಲ್ಲಿ ಸೈನ್ಯ ಕಟ್ಟಿದ್ದೇವೆ. ಇಂದು ಕರ್ನಾಟಕದಲ್ಲಿ ಕನ್ನಡ ಹುಡುಕುವಂತಹ ಪರಿಸ್ಥಿತಿ ಬಂದಿದೆ,ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಸ್ನಾತಕ್ಕೋತ್ತರ ಪದವಿ ಪುರಸ್ಕ್ರತೆ ರಾಜೇಶ್ವರಿ ಎಮ್ ನಾಯ್ಕ,ಗೇರುಸೊಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಲಕ್ಷ್ಮಣ ಎಮ್.ಎಮ್,ಅಗ್ನಿವೀರ ವಿಭಾಗಕ್ಕೆ ಆಯ್ಕೆಯಾದ ಜಗದೀಶ ಮರಾಠಿ,ರಂಗಭೂಮಿ ಮತ್ತು ಸಂಗೀತ ಕಲಾವಿದರಾದ ಬಾಲು ಯಾಜಿ ಮಣ್ಣಿಗೆ,ಊರ ಹಿರಿಯರಾದ ಮಾದೇವ ನಾರಾಯಣ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕದಂಬ ಸೈನ್ಯ ಸಂಘಟನೆ ಸರಳಗಿ ಘಟಕ ಅಧ್ಯಕ್ಷರಾಗಿದ್ದ ದಿವಂಗತ ಗಣಪತಿ ನಾರಾಯಣ ನಾಯ್ಕ ಅವರಿಗೆ ಕಾರ್ಯಕ್ರಮ ಪೂರ್ವದಲ್ಲಿ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

ವೇದಿಕೆಯಲ್ಲಿ ಉಪ್ಪೋಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ನಾಯ್ಕ, ಉಪಾಧ್ಯಕ್ಷೆ ಮಾದೇವಿ ಉಪ್ಪಾರ, ಸದಸ್ಯರುಗಳಾದ ವಿನೋದ್ ನಾಯ್ಕ, ತಬರೇಜ್ ಖಾನ್, ನಗರ ಬಸ್ತಿಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ್ ಎಂ. ನಾಯ್ಕ್,ಸದಸ್ಯರಾದ ಮಹೇಶ ಎಂ. ನಾಯ್ಕ್,ಮಂಜುನಾಥ್ ನಾಯ್ಕ,ಸಂಘಟನೆ ಜಿಲ್ಲಾ ಸಂಚಾಲಕ ಪುರಂದರ ನಾಯ್ಕ,ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ,ಧರ್ಮದರ್ಶಿ ಗಜಾನನ ಆರ್, ಅರ್ಚಕರಾದ ಮಾರುತಿ ಉಪ್ಪಾರ,ಸಮಾಜ ಸೇವಕರಾದ ಜಾಫರ್ ಖಾನ್, ಮುಜಾಫರ್ ಇಸುಫ್ ಸಾಬ್, ಕದಂಬ ಸೈನ್ಯ ಸರಳಗಿ ಘಟಕ ಅಧ್ಯಕ್ಷ ನಾರಾಯಣ ಉಪ್ಪಾರ,ಉಪ್ಪಾರ ಸಮಾಜದ ಅಧ್ಯಕ್ಷ ನರಸಿಂಹ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಲೊಕೇಶ್ ಉಪ್ಪಾರ್,ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ನಾಯ್ಕ ಉಪಸ್ಥಿತರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ,ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನ ನಡೆಯಿತು.