2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಅಲ್ಲಿಗೆ ಭಾರತದ ವಿಶ್ವಕಪ್ ಕನಸು ಕಮರಿದೆ. ನಿನ್ನೆ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ಕೋಣೆಗೆ ತೆರಳಿ, ಆಟಗಾರರನ್ನು ಹುರಿದುಂಬಿಸುವ ಕೆಲಸವನ್ನು ಸಹ ಮಾಡಿದ್ದಾರೆ..
ಆಟಗಾರರನ್ನು ಭೇಟಿಯಾದ ಮೋದಿ
ಫೈನಲ್ ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮೂಲದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ ತಂಡದ ಇತರ ಆಟಗಾರರನ್ನು ಭೇಟಿ ಮಾಡಿದರು. ಹಾಗೆಯೇ ಟೂರ್ನಿಯಲ್ಲಿ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು. ಆಟಗಾರರನ್ನು ಮೋದಿ ಭೇಟಿ ಮಾಡಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಜಡೇಜಾ, ನಾವು ವಿಶ್ವಕಪ್ನಲ್ಲಿ ಅದ್ಭುತ ಜರ್ನಿ ಹೊಂದಿದ್ದೇವು. ಆದರೆ ನಿನ್ನೆಯ ದಿನ ನಮ್ಮದಾಗಿರಲಿಲ್ಲ. ಸೋಲಿನ ಹತಾಶೆಯಲ್ಲಿದ್ದ ನಮಗೆ ಮೋದಿ ಅವರ ಭೇಟಿ ಹೆಚ್ಚಿನ ಉತ್ಸಾಹ ತುಂಬಿದೆ ಎಂದು ಬರೆದುಕೊಂಡಿದ್ದಾರೆ.
ಡ್ರೆಸ್ಸಿಂಗ್ ಕೋಣೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬಳಿಕ ಭಾರತ ತಂಡದ ಆಟಗಾರ ಮೊಹಮ್ಮದ್ ಶಮಿ ಕೂಡ ಟ್ವೀಟ್ ಮಾಡಿದ್ದು, ದುರದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಪಂದ್ಯದುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲಾ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸುವುದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ವಿಶೇಷ ಧನ್ಯವಾಗಳು. ನಾನು ಮತ್ತೆ ಪುಟಿದೇಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಅಭಿನಂದಿಸಿದ ಮೋದಿ
ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಅಭಿಯಾನದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ಪ್ರಧಾನಿ ಮೋದಿ, ಪ್ರೀತಿಯ ಭಾರತ ತಂಡ, ಈ ವಿಶ್ವಕಪ್ನಲ್ಲಿ ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯ ಗಮನಾರ್ಹವಾಗಿದೆ. ನೀವು ಬಹಳ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದೀರಿ ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಬರೆದುಕೊಂಡಿದ್ದರು.
ಈ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿದ್ದ ಭಾರತ, ಒಂದೇ ವರ್ಷದಲ್ಲಿ ಎರಡನೇ ಬಾರಿ ಐಸಿಸಿ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಮುಗ್ಗರಿಸಿದೆ.