ಅಂಕೋಲಾ: ಇತ್ತೀಚಿನ ವರ್ಷಗಳಲ್ಲಿ ಅಂಕೋಲಾ ತಾಲೂಕಿನ ಅದೇ ಹರಿಯದವರಲ್ಲಿ ಪ್ರೀತಿ ಪ್ರೇಮದ ಗೋಳು ಹೆಚ್ಚುತ್ತಿದ್ದು ಅದಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪೊಲೀಸರು ನಿರಂತರವಾಗಿ ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಿದರೂ ಯುವ ಸಮುದಾಯ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಕಂಡು ಬರುತ್ತಿದೆ. ಕೋವಿಡ್ ನಂತರ ಆನ್ಲೈನ್ ತರಗತಿಯ ನೆಪದಲ್ಲಿ ಪುಸ್ತಕಗಳನ್ನು ಬದಲಿಸಿದ ಮೊಬೈಲ್ ಫೋನ್ ಗಳು ಈ ರೀತಿಯ ಹಾವಳಿಗಳು ಹೆಚ್ಚಾಗುವಂತೆ ಮಾಡುತ್ತಿವೆ.
ಇದಕ್ಕೆ ಪೂರಕವಾಗಿ ತಾಲೂಕಿನಲ್ಲಿ ಇತ್ತೀಚಿಗೆ ಹದಿ ಹರೆಯದ ಮತ್ತು ವಯಸ್ಕರ ನಾಪತ್ತೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ವಿವಾಹಿತ ಮಹಿಳೆಯೋರ್ವರು ತನ್ನ 12 ವರ್ಷದ ಮಗಳೊಂದಿಗೆ ಮನೆಗೆ ಬಾರದೆ ನಾಪತ್ತೆಯಾಗಿರುವ ಕುರಿತು ಅವರ ಪತಿ ಗುರುವಾರ ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೆಲವು ದಿನಗಳ ಹಿಂದೆ ಇಲ್ಲಿನ ಶೆಟಗೇರಿಯಲ್ಲಿ ಹೊರ ಜಿಲ್ಲೆಯ ಮೂಲದ ಯುವತಿಯೋರ್ವರು ನಾಪತ್ತೆಯಾಗಿದ್ದರು. ಅದಾದ ನಂತರ ತಾಲೂಕಿನ ಬೊಬ್ರವಾಡದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಎರಡು ಪ್ರಕರಣಗಳಲ್ಲಿ ತ್ವರಿತ ಕಾರ್ಯನಿರ್ವಹಿಸಿದ ಪೊಲೀಸರು ಸುಖಾಂತ್ಯ ಹಾಡಿದ್ದರು.
ಶುಕ್ರವಾರ ಇಲ್ಲಿನ ಬೇಲೆಕೇರಿಯ ಖಾರ್ವಿವಾಡ ಮೂಲದ ಕಾರವಾರದ ಕಿಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ. ಮನೆಯಲ್ಲಿ ಮಲಗಿದ್ದು ಮಧ್ಯರಾತ್ರಿ ಇಲ್ಲವೇ ನಸುಕಿನ ವೇಳೆ ಎಲ್ಲಿಯೋ ಹೋಗಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ.
ಕೆಲವು ತಿಂಗಳ ಹಿಂದೆ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಹೀಗೆ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಅದರಲ್ಲಿಯೂ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿದೆ.
ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಹಾಯವಾಣಿ, ರಕ್ಷಣಾ ಘಟಕಗಳು ಈ ರೀತಿಯ ಘಟನೆಗಳು ಜರಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿಷ್ಕ್ರಿಯವಾಗಿವೆಯೇ? ಈ ಹಿಂದೆ ಜಿಲ್ಲೆಯಲ್ಲಿ ಅತಿ ಹೆಚ್ಚು ಪೋಕ್ಸೋ ಪ್ರಕರಣಗಳು ಕಂಡುಬರುವ ತಾಲೂಕುಗಳಲ್ಲಿ ಅಂಕೋಲಾ ಒಂದಾಗಿದ್ದು, ಆದಾಗಿಯೂ ವಿಶೇಷ ಗಮನಹರಿಸುವಲ್ಲಿ ವಿಫಲವಾಗಿವೆ ಎಂದುಯೇ? ಅಥವಾ ಅವುಗಳ ಅಧಿಕಾರ ವ್ಯಾಪ್ತಿ ಸೀಮಿತವಾಗಿವೆಯೇ ಎನ್ನುವುದು ಪ್ರಶ್ನೆಯಾಗಿದೆ.