ಮಂಕಿ ಗ್ರಾಮ ಪಂಚಾಯತಿಯ ಸಿ ಚಿತ್ತಾರದ 2023-24 ನೇ ಸಾಲಿನ ಗ್ರಾಮ ಸಭೆ

ಹೊನ್ನಾವರ ತಾಲೂಕಿನ ಮಂಕಿ ಗ್ರಾಮ ಪಂಚಾಯ್ತಿಯ ಸಿ ಚಿತ್ತಾರದ 2023-24 ನೇ ಸಾಲಿನ ಗ್ರಾಮ ಸಭೆ, ಪಂಚಾಯತ್ ವ್ಯಾಪ್ತಿಯ ಅಡಿಕೆಕುಳಿ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಗ್ರಾಮ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ತಮ್ಮ ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಅದೇ ರೀತಿ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಬಗ್ಗೆ, ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಬಗ್ಗೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಗ್ರಾಮಸ್ಥ ಗಿರೀಶ ನಾಯ್ಕ ಹಡಿಕಲ್ ಸಭೆಯಲ್ಲಿ ಮಾತನಾಡಿ, ಗ್ರಾಮ ಸಭೆಯಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದ ಎಲ್ಲಾ ಯೊಜನೆಯ ಹೆಸರು ಮತ್ತು ಹೇಗೆ ಎಲ್ಲಿ ಪಡೆದುಕೊಳ್ಳಬೇಕು ಎನ್ನುವುದರ ಯೋಜನಾ ಕೈಪಿಡಿ ಮಾಡಿ ಗ್ರಾಮ ಪಂಚಾಯತ್‌ನಲ್ಲಿ ಕೊಡಲು ಹಿಂದಿನ ಸಭೆಯಲ್ಲಿಯೆ ತಿಳಿಸಿದ್ದೇನೆ. ಆದ್ರೆ ಇನ್ನೂ ಯಾರು ಸಹ ಅದರ ಬಗ್ಗೆ ಮಾಹಿತಿ ನೀಡಿಲ್ಲ. ಇಲಾಖೆಯ ಯೋಜನೆ ಮಾಹಿತಿ ಕೈಪಿಡಿ ಗ್ರಾಮ ಪಂಚಾಯತ್‌ನಲ್ಲೇ ಸಿಕ್ಕರೆ ಪ್ರತಿ ಹಳ್ಳಿಯ ಜನರಿಗೆ ಉಪಯೋಗ ಸಿಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅರೋಪಿಸಿದರು…

ಸಭೆಯಲ್ಲಿ ಆಡಳಿತಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.