ಹೊನ್ನಾವರತಾಲೂಕಿನಾದ್ಯಂತ ಸಡಗರ ,ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ದೀಪಾವಳಿ ಹಾಗೂ ಗೋಪೂಜೆ ಆಚರಣೆ

ಹೊನ್ನಾವರ:ತಾಲೂಕಿನಾದ್ಯಂತ ಸಡಗರ ,ಸಂಭ್ರಮದಿಂದ ಸಂಪ್ರದಾಯಬದ್ದವಾಗಿ ಮಂಗಳವಾರ ದೀಪಾವಳಿ ಆಚರಣೆ,ಗೋಪೂಜೆ ಸಂಪನ್ನವಾಯಿತು.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ.ಪ್ರತಿಯೊಂದು ಮನೆಯಲ್ಲಿಯು ಬಲೀಂದ್ರನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.ಕೆಲವರು ಮೊಗೆಕಾಯಿ,ಇನ್ನೂ ಕೆಲವರು ಮೂರ್ತಿ ರೂಪದಲ್ಲಿ ಬಲೀಂದ್ರನನ್ನು ಪೂಜಿಸುತ್ತಾರೆ.ದೀಪಾವಳಿ ದಿನದಂದು ಹೊಸ ಬಟ್ಟೆ ಧರಿಸಿ, ಸಿಹಿ ಹಂಚಿದರು. ಚಿಣ್ಣರು,ಯುವಕರು ಪಟಾಕಿ ಸಿಡಿಸಿ ಈ ಸಂಭ್ರಮಕ್ಕೆ ಮೆರಗು ತಂದಿದ್ದರು.ದೀಪಾವಳಿಯ ಕೊನೆಯ ದಿನದ ಹಬ್ಬ ‘ದೊಡ್ಡಹಬ್ಬ’ ಎಂದು ಕರೆಯಲ್ಪಡುತ್ತದೆ.ಭತ್ತದ ಗದ್ದೆಯ ಹೊಸ ಭತ್ತದ ಪೈರನ್ನು ತಂದು ತೆಂಗಿನ ಮರಕ್ಕೆ ಕಟ್ಟಿ ಪೂಜೆ ಸಲ್ಲಿಸುವ ಶಾಸ್ತ್ರ ನಡೆಸುತ್ತಾರೆ. ತದನಂತರ ಮನೆಯ ಪ್ರಧಾನ ಭಾಗಿಲಿಗೆ, ಕೊಟ್ಟಿಗೆಗಳಿಗೆ,ಮನೆಯ ಪ್ರಮುಖ ಪರಿಕರಗಳಿಗೆ ಕಟ್ಟುತ್ತಾರೆ.ದೀಪಾವಳಿ ಕೆಲವರಿಗೆ ಮೂರು ದಿನದ,ಕೆಲವರಿಗೆ ನಾಲ್ಕು ದಿನದ, ಉಳಿದವರಿಗೆ ಪಂಚ ದಿನಗಳ ಹಬ್ಬವಾಗಿದೆ.


ತಲೆತಲಾಂತರಗಳಿಂದ ನಡೆಯುವ ಸಂಪ್ರದಾಯಗಳು ಮಾತ್ರ ಯತಾವತ್ತಾಗಿ ಇಂದಿಗೂ ಹಲವೆಡೆ ಮುಂದುವರೆದುಕೊಂಡು ಬಂದಿದೆ.ಅಂತಯೇ ಕೆಲವೆಡೆ ದೀಪಾವಳಿ ಸಂಧರ್ಭದಲ್ಲಿ ಗೋವುಗಳಿಗು ಪೂಜೆ ಸಲ್ಲಿಸುವ ವಾಡಿಕೆಯು ಇದೆ.
ಬಲಿಪಾಡ್ಯಮಿ ದಿನದಂದು ಹಬ್ಬವು ವಿಶೇಷವಾಗಿ ನಡೆದಿದ್ದು, ಬಲೀಂದ್ರನಿಗೆ ವಿಶೇಷವಾಗಿ ತಯಾರಿಸಲಾದ ಕೊಟ್ಟೆರೊಟ್ಟಿ, ಅನ್ನ, ಸಾರನ್ನು ಬಡಿಸಿದರು. ಬಲೀಂದ್ರನಿಗೆ ನಮಸ್ಕರಿಸಿ ಮನೆ ಮಂದಿಯೆಲ್ಲ ಹಬ್ಬದೂಟ ಮಾಡಿದರು. ರಾತ್ರಿ ಪೂಜೆಯ ನಂತರ ಮುತೈದೆಯರು ಹಿಟ್ಟಿನ ಆರತಿ ಮಾಡಿದರು. ಆರತಿಯನ್ನು ನೋಡಿದ ಮನೆಮಂದಿ ಆರತಿ ತಟ್ಟೆಗೆ ಕಾಣಿಕೆ ಮಾಡಿ ನಮಸ್ಕರಿಸಿದರು.ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ಬಲೀಂದ್ರನಲ್ಲಿಟ್ಟ ಕಳಸದ ನೀರನ್ನು ವಿಸರ್ಜಿಸುವ ಮೂಲಕ ಹಬ್ಬ ಸಂಪನ್ನವಾಯಿತು.

ಅದೇನೆ ಇರಲಿ ಹಬ್ಬಗಳು ಎಂದರೆ ಅದು ನಮ್ಮತನ,ಸಂಸ್ಕ್ರತಿ, ಸಂಪ್ರದಾಯದ ಪ್ರತೀಕವಾಗಿದೆ.ಅದರಲ್ಲೂ ವರುಷಕ್ಕೊಮ್ಮೆ ಬರುವ ದೀಪಾವಳಿ ನಿಜಕ್ಕೂ ಸಡಗರ,ಸಂಭ್ರಮದ ಹಾವಳಿ ಎನ್ನಬಹುದು.