ಕುಮಟಾದ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನಲ್ಲಿ ದೀಪಾವಳಿ ಮೇಳ – ಗಮನ ಸೆಳೆದ ಸಾಂಸ್ಕೃತಿಕ ವೈಭವ

ಕುಮಟಾ : ಬಣ್ಣ ಬಣ್ಣದ ರಂಗವಲ್ಲಿಗಳು, ಹಣತೆಯ ಬೆಳಕು, ದೀಪ ಬೆಳಗುತ್ತಿರುವ ಮಾತೆಯರು, ಎಲ್ಲಿ ನೋಡಿದರೂ ಆಕಾಶಬುಟ್ಟಿಯ ರಂಗು, ಬಗೆ ಬಗೆಯ ಹೂವುಗಳ ಅಲಂಕಾರ, ವಿದ್ಯುತ್ ದೀಪಗಳಿಂದ ಅಲಂಕೃತ ಕಟ್ಟಡ, ಬಗೆ ಬಗೆಯ ಖಾದ್ಯಗಳು ಹಾಗೂ ದೀಪಾವಳಿ ವಿಶೇಷ ತಿನಿಸುಗಳನ್ನು ಒಳಗೊಂಡ ದೀಪಾವಳಿ ಮಾರಾಟ ಮಳಿಗೆ, ಹಬ್ಬದ ಸವಿ ಅನುಭವಿಸುತ್ತಿದ್ದ ಮಕ್ಕಳು, ಸಂಸ್ಕೃತಿ ಸಂಪ್ರದಾಯದ ಅರಿವು ಮೂಡಿಸಿದ ಗಣ್ಯರು, ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆಲ್ಲವೂ ಕಂಡು ಬಂದಿದ್ದು ಶುಕ್ರವಾರ ಸಂಜೆ ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಅಂಗ ಸಂಸ್ಥೆಗಳು ಹಾಗೂ ಮಾತೃಮಂಡಳಿಯವರು ಸಾದರಪಡಿಸಿದ ‘ದೀಪಾವಳಿ ಮೇಳ’ ದಲ್ಲಿ. ಈ ಕಾರ್ಯಕ್ರಮವು ಸಂಸ್ಕಾರದ ಜೊತೆ ಜೊತೆಗೆ ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಾಡಾಗಿ ಗಮನ ಸೆಳೆಯಿತು.

ಪ್ರತೀ ವರ್ಷ ದೀಪಾವಳಿಯ ಪೂರ್ವದಲ್ಲಿ ಕಳೆದ ಎಂಟು ವರ್ಷಗಳಿಂದ ದೀಪಾವಳಿ ಮೇಳವನ್ನು ಸಂಘಟಿಸುತ್ತಾ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸುವುದರ ಜೊತೆಗೆ ಕಲೆ ಸಂಪ್ರದಾಯವನ್ನು ಪರಿಚಯಿಸುವ ಕಾರ್ಯವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿರುವುದು ಗಮನಾರ್ಹ. ದೀಪಾವಳಿ ಮೇಳವನ್ನು ದೀಪ ಪ್ರಜ್ವಲನೊಂದಿಗೆ ಉದ್ಘಾಟಿಸಿದ ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ಮಂಜುನಾಥ ಗಾಂವ್ಕರ್ ಬರ್ಗಿ ದೀಪಾವಳಿಯ ಸಂದೇಶವನ್ನು ನೀಡುತ್ತಾ, ದೀಪಾವಳಿಯ ಆಚರಣೆಯ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳು ಅದರಿಂದ ಕಲಿಯಬೇಕಾದ ಅಂಶಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಜೀವನ ಎಂದರೆ ಮೊದಲ ಪುಟ ಹಾಗೂ ಕೊನೆಯ ಪುಟ ಇಲ್ಲದ ಪುಸ್ತಕ ಹೀಗಾಗಿ ನಾವು ಬದುಕನ್ನು ಸಂಭ್ರಮದಿಂದ, ಸಂಸ್ಕಾರಯುತವಾಗಿ ಕಳೆಯಬೇಕು ಇನ್ನೊಬ್ಬರಿಗೆ ನೆರವಾಗುವುದು ಜೀವನದ ಧ್ಯೇಯವಾಗಬೇಕು ಎಂದು ಅವರು ತಿಳಿಸಿದರು.

ಒಂದು ವ್ಯವಸ್ಥೆಯಲ್ಲಿ ಧೀಮಂತರನ್ನು ಹಿಡಿದಿಡುವುದು ಇಂದಿನ ಅಗತ್ಯವಾಗಿದ್ದು, ಸಮಾಜಕ್ಕೆ ಸಂದೇಶ ಕೊಡಬೇಕಾದ ಎಲ್ಲ ಕಾರ್ಯವನ್ನೂ ಕೊಂಕಣ ಎಜುಕೇಶನ್ ಟ್ರಸ್ಟ್ ಮಾಡುತ್ತಿದೆ. ಅವರವರು ಅವರವರ ಭಾವವನ್ನು ಹೊರ ಹಾಕುವ ಅಭಿಪ್ರೇರಣೆ ಇಂದಿನ ಅವಶ್ಯಕತೆಯಾಗಿದ್ದು, ಆ ನಿಟ್ಟಿನಲ್ಲಿ ಸಂಸ್ಕಾರದ ಜೊತೆಗೆ ಶಿಕ್ಷಣವನ್ನು ಕುಮಟಾದಲ್ಲಿ ನೀಡಲಾಗುತ್ತಿರುವುದು ಬಹು ವಿಶೇಷವಾಗಿದೆ. ವ್ಯಕ್ತಿಯ ಬದುಕಿಗೆ ಬೇಕಾದ ಶಿಕ್ಷಣವನ್ನು ನೀಡಬೇಕು ಶಿಕ್ಷಣ ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿರದೆ ಬದುಕು ಕಟ್ಟಿಕೊಳ್ಳಲು ಅವಶ್ಯವಾಗಬೇಕು. ಈ ನೆಲೆಯಲ್ಲಿ ಈ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು. ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನ ತಾಯಿಗೆ ಇದೆ. ಅಂತಹ ತಾಯಂದಿರನ್ನು ಸೇರಿಸಿ, ಮಾತೃ ಮಂಡಳಿಯನ್ನು ರಚಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಕಾರ್ಯಕ್ರಮ ಸಂಯೋಜಿಸುತ್ತಿರುವುದು ಬಹು ವಿಶೇಷವಾಗಿದೆ. ಬದುಕಿಗೆ ಬೇಕಾದ ಶಿಕ್ಷಣವನ್ನು ನೀಡುತ್ತಾ, ಸಂಸ್ಕಾರವನ್ನು ನೀಡುತ್ತಾ, ಸಾಧನೆಗೆ ಪೂರಕವಾಗಿ ನಡೆದುಕೊಳ್ಳುವ ಸಂಸ್ಥೆಯ ಶಿಕ್ಷಕರು ಹಾಗೂ ಸಿ.ವಿ.ಎಸ್.ಕೆ ಯ ಮುಖ್ಯಶಿಕ್ಷಕಿ ಸುಮಾ ಪ್ರಭು ಅವರ ಕಾರ್ಯ ಶ್ಲಾಘನೀಯ ಎಂದರು.

ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದ ಸೀಮಾ ವೈಕುಂಠ ಪ್ರಭು ಮಾತನಾಡಿ ಹಿಂದಿನಿಂದಲೂ ಸಂಸ್ಥೆಯ ಜೊತೆಗೆ ಒಡನಾಟ ಹೊಂದಿದ್ದು, ಸಂಸ್ಥೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೈಗೊಳ್ಳುತ್ತಿರುವ ಕಾರ್ಯ ಯೋಜನೆಗಳು ಮೆಚ್ಚುವಂತದ್ದು. ಇಂತಹ ಹಬ್ಬಗಳನ್ನು ಸಂಸ್ಥೆಯಲ್ಲಿ ಆಚರಿಸುತ್ತಿರುವುದು ವಿಶೇಷ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು, ಪಾಲಕರು ಪಡೆದುಕೊಳ್ಳಬೇಕು ಎಂದರು.ಖ್ಯಾತ ಸಂಗೀತ ಕಲಾವಿದೆ ರೇಷ್ಮಾ ಭಟ್ಟ ಕಲ್ಲಾರೆಮನೆ ಆತಿಥ್ಯವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಶಿಕ್ಷಣದಲ್ಲಿ ಮಾತ್ರ ಮುಂದೆ ಬಂದರೆ ಸಾಲದು ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಬದುಕಿನಲ್ಲಿ ಪರಿಪೂರ್ಣತೆ ಬರಬೇಕಾದರೆ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಶಿಕ್ಷಣದ ಜೊತೆ ಜೊತೆಗೆ ಇತರ ಸಂಸ್ಕಾರಗಳನ್ನು ಸೇರಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಮುರಳಿಧರ ಪ್ರಭು ಪ್ರಸ್ತಾವಿಕವಾಗಿ ಮಾತನಾಡಿ ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ, ಜ್ಞಾನ ತೈಲವನ್ನು ಎರೆದು, ಅವರ ಬದುಕನ್ನು ಬೆಳಗಿಸುವ ಶಿಕ್ಷಣ ಸಂಸ್ಥೆಗಳಲ್ಲಿ ನಿತ್ಯವೂ ದೀಪಾವಳಿ ನಡೆಯುತ್ತದೆ. ಅದರ ತಾತ್ಪರ್ಯವಾಗಿ ಇಂತಹ ಹಬ್ಬಗಳ ಆಚರಣೆ ನಡೆಯುತ್ತದೆ. ಸಂಸ್ಕಾರವನ್ನು ನೀಡುವ ನಿಟ್ಟಿನಲ್ಲಿ ಇಡೀ ಸಮಾಜ ಸಾಗುತ್ತಿರುವ ದಿಕ್ಕಿಗೆ ವಿರುದ್ಧವಾಗಿ ನಾವು ಸಾಗುತ್ತಿದ್ದೇವೆ. ಹೀಗಾಗಿ ನಮ್ಮ ಮುಂದೆ ದೊಡ್ಡ ಸವಾಲುಗಳಿವೆ ನಿಧಾನಕ್ಕೆ ಪರಿವರ್ತನೆಯನ್ನು ಕಾಣುತ್ತಿದ್ದೇವೆ ಎಂದು ಅವರ ಅಭಿಪ್ರಾಯ ಪಟ್ಟರು.

ಕೊಂಕಣ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ವಿಠ್ಠಲ್ ಆರ್ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಹಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರುಗಳಾದ ರಮೇಶ ಪ್ರಭು ಅನಂತ ಶಾನಭಾಗ, ಡಾ. ವೆಂಕಟೇಶ ಶಾನಭಾಗ, ರಾಮಕೃಷ್ಣ ಶಾನಭಾಗ ಗೋಳಿ, ಗಜಾನನ ಕಿಣಿ, ಸಲಹೆಗಾರ ಆರ್.ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಮಾತೃಮಂಡಳಿಯ ಅಧ್ಯಕ್ಷರುಗಳಾದ ಆರಾಧ್ಯಾ ಆರ್. ಭಟ್ಟ, ಜ್ಯೋತಿ ಮೋಹನ ಅಂಬಿಗ, ಮೇಘಾ ಬಾಳಗಿ ಹಾಗೂ ಸಂಸ್ಥೆಯ ಪ್ರಾಂಶುಪಾಲರು‌, ಮಾತೃಮಂಡಳಿ ಪದಾಧಿಕಾರಿಗಳು, ಮುಖ್ಯಶಿಕ್ಷಕರು ವೇದಿಕೆಯಲ್ಲಿದ್ದರು.

ವೇದಿಕೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಕುಮಟಾದ ಕೀರ್ತನ ಗಣಪತಿ ನಾಯಕ, ಸಚಿನ್ ಶಿವಾನಂದ ಗೌಡ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತಿಸಿದರು. ಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ ವಂದಿಸಿದರು. ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಗೌರೀಶ ಭಂಡಾರಿ ಸಹಕರಿಸಿದರು. ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಗಮನ ಸೆಳೆದ ಸ್ಪರ್ಧೆಗಳು

ದೀಪಾವಳಿ ಮೇಳದ ಅಂಗವಾಗಿ ಮಾತೆಯರಿಗೆ ಹಾಗೂ ಮಕ್ಕಳಿಗೆ ಹಮ್ಮಿಕೊಂಡಿದ್ದ ಆಕಾಶ ಬುಟ್ಟಿ ತಯಾರಿಕೆ, ಹಣ್ಣಿನ ಕ್ರಾಫ್ಟ್, ಕುಂಭ ಅಲಂಕಾರ, ರಂಗೋಲಿ, ಪ್ಲಾಸ್ಟಿಕ್ ಬಾಟಲಿಯಿಂದ ಹೂ ಕುಂಡ ತಯಾರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ದೀಪಾವಳಿ ಮೇಳದ ಸ್ಪರ್ಧಾ ಕಾರ್ಯಕ್ರಮವನ್ನು ಲಯನ್ಸ್ ರೇವಣ್ಕರ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ, ವೈದ್ಯರುಗಳಾದ ಡಾ. ಮನೋಜ ಎಂ.ಎನ್, ಡಾ.ಪೂನಮ್ ಉದ್ಘಾಟಿಸಿ ಶುಭ ಹಾರೈಸಿದರು.

ದೀಪಾವಳಿ ಮಳಿಗೆಯಲ್ಲಿ ಬರಪೂರ ವ್ಯಾಪಾರ.

ದೀಪಾವಳಿ ಮೇಳದ ವಿಶೇಷ ಆಕರ್ಷಣೆಯಾಗಿ ದೀಪಾವಳಿ ಮಳಿಗೆಗಳನ್ನು ಸಂಯೋಜಿಸಲಾಗಿದ್ದು, ಸುಮಾರು 60 ಜನ ಮಳಿಗೆಯನ್ನು ಪಡೆದು, ವಿವಿಧ ಬಗೆಯ ತಿಂಡಿ ತಿನಿಸುಗಳು, ದೀಪಾವಳಿ ಅಲಂಕಾರಿಕ ವಸ್ತುಗಳು, ಮನೆಯಲ್ಲಿಯೇ ಮಾಡಿದ ವಿಶೇಷ ಖಾದ್ಯಗಳು, ಬಳೆ ಒಡವೆ ಇನ್ನಿತರ ವಸ್ತುಗಳನ್ನು ವ್ಯಾಪಾರ ಮಾಡಿ ಗಮನ ಸೆಳೆದರು. ವಿದ್ಯಾರ್ಥಿಗಳು ಪಾಲಕರ ಜೊತೆಗೆ ಸಹಕರಿಸಿದ್ದರು. ಲತಾ ಶ್ರೀಧರ ಹೆಗಡೆ ಮನೆಯಿಂದಲೇ ಸಾಂಪ್ರದಾಯಿಕ ಗೆಣಿಸಲೆ ಮಾಡಿ ತಂದು ದೀಪಾವಳಿ ವಿಶೇಷ ಖಾದ್ಯ ಪುರಸ್ಕಾರಕ್ಕೆ ಪಾತ್ರರಾದರು.

ನರಕಾಸುರ ದಹನ.

ಬಹು ವಿಶೇಷವಾಗಿ ನಿರ್ಮಿಸಲಾಗಿದ್ದ ದೈತ್ಯಾಕಾರದ ನರಕಾಸುರನನ್ನು ದಹಿಸುವ ಮೂಲಕ ದೀಪಾವಳಿ ಮೇಳ ಸಂಪನ್ನಗೊಂಡಿತು. ನಮ್ಮೊಳಗಿನ ಅಸುರೀ ಶಕ್ತಿಯನ್ನು ನಾಶಪಡಿಸಿಕೊಂಡು ಜಗತ್ತನ್ನು ಬೆಳಗುವ ದೀಪದಂತೆ ನಾವಾಗಬೇಕು ಎನ್ನುವ ಸಂದೇಶ ನೀಡಿ ಈ ನರಕಾಸುರ ದಹನವನ್ನು ನಡೆಸಲಾಯಿತು.